ಪುಟಗಳು

ಮಂಗಳವಾರ, ಡಿಸೆಂಬರ್ 4, 2012

ಅಮೃತೇಶ್ವರೀ ದೇವಿ ಹಲವು ಮಕ್ಕಳ ತಾಯಿ.................Bharath krishna




ಅಮೃತೇಶ್ವರೀ ದೇವಿ ಹಲವು ಮಕ್ಕಳ ತಾಯಿ.................



ಈ ಹಿಂದೆ ರಾವಣನ ಬಂಧುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಭಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ ದೂಷಣ ತ್ರಿಶಿರಾದಿ ಅನುಚರರಿಂದಲೂ ಕೂಡಿಕೊಂಡು ತನ್ನ ಅಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು.

ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಟನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತಾ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವ್ರತಾ ಪಾರಾಯಣಳು, ಸಾಧು ಸ್ವಭಾವದವಳು ಆಗಿದ್ದು ಸದಾಕಾಲ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು.

ಹೀಗಿರಲು ಒಮ್ಮೆ ವಿಹಾರಕ್ಕಾಗಿ ಶೂರ್ಪನಖಿಯನ್ನು ಕೂಡಿ ಕೊಂಡು ಕುಂಭಮುಖಿಯು ವನದಲ್ಲಿ ಸಂಚಾರ ಮಾಡುತ್ತಿರಲು ಮಧುಮಾಸದ ವನಸಿರಿಗೆ ಮನಸೋತ ಅವರೀರ್ವರು ಪುಷ್ಪ ಸಂಗ್ರಹ ಹಾಗೂ ಮಧು ಸಂಗ್ರಹ ಮಾಡುತ್ತಾ ಬೇರೆ ಬೇರೆ ಮಾರ್ಗದಲ್ಲಿ ಹೋದರು. ಆಗ ಇದೇ ಮಾರ್ಗದಲ್ಲಿ ಎಕಮುಖಿ ಮಹರ್ಷಿಗಳ ಪತ್ನಿಯಾದ ಅತಿಪ್ರಭೆ ಎನ್ನುವವಳು ತನ್ನ ಪತಿಯು ನಿಧನ ಹೊಂದಿದುದರಿಂದ ವೈರಾಗ್ಯದಿಂದ ಕೂಡಿದವಳಾಗಿ, ಪ್ರಾಯ ಪ್ರಬುದ್ಧನೂ, ಸುಂದರನೂ, ವಿಧ್ಯಾವಂತನೂ ಆದ ತನ್ನ ಮಗ ಬಹುಶ್ರುತ ಎಂಬವನೊಂದಿಗೆ ತೀರ್ಥಯಾತ್ರೆಗಾಗಿ ಕಾಶಿ ಕ್ಷೇತ್ರಕ್ಕೆ ಪ್ರಯಾಣ ಮಾಡುತ್ತಿದ್ದಳು.

ಹೀಗಿರಲು ಶೂರ್ಪನಖಿಯು ಪತಿಪ್ರಭೆಯ ಮಗನಾದ ಆ ಋಷಿ ಕುಮಾರನನ್ನು ನೋಡಿ ಮೋಹಿತಳಾಗಿ ಪರಿಪರಿಯಾಗಿ ಬೇಡಿದರೂ, ಆತನು ಒಪ್ಪದಿರಲು ಶೂರ್ಪನಖಿಯು ಬಲತ್ಕಾರದಿಂದ ಆತನನ್ನು ಸಂಹರಿಸಿದಳು. ತನ್ನ ಎಕಮಾತ್ರ ಪುತ್ರನ ಮರಣದಿಂದ ಅತಿಪ್ರಭೆಯು ದುಃಖದಿಂದ ರೋಧಿಸುತ್ತಿರುವಾಗ, ಈ ಶಬ್ದವನ್ನು ಕೇಳಿದ ಕುಂಭಮುಖಿಯು ಅಲ್ಲಿಗೆ ಬಂದಳು. ಶೋಕಾಂಧಳಾದ ಅತಿಪ್ರಭೆಯು ಈ ಕುಂಭಮುಖಿಯನ್ನೇ ತನ್ನ ಮಗನನ್ನು ಸಂಹರಿಸಿದ ಶೂರ್ಪನಖಿ ಎಂತ ತಿಳಿದು, ನಿನಗೆ ಮಕ್ಕಳು ಹುಟ್ಟದೇ ಹೋಗಲಿ ಎಂದು ಶಾಪ ಕೊಟ್ಟಳು. ನಂತರ ತನ್ನ ಮಗನ ಮರಣಕ್ಕೆ ಕಾರಣಳಾದವಳು ಕುಂಭಮುಖಿ ಅಲ್ಲವೆಂದು ತಿಳಿದು, ನಿಜಕ್ಕೂ ಮಗನನ್ನು ಸಂಹರಿಸಿದ ಶೂರ್ಪನಖಿಗೆ " ನೀನು ಪುನಃ ರೂಪವಂತನನ್ನು ಮೋಹಿಸಿ ಮಾನಭಂಗ ಹೊಂದಿದವಳಾಗಿ ನಿನ್ನ ವಂಶಕ್ಕೆ ಮೃತ್ಯು ಸ್ವರೂಪಳಾಗೆಂದು " ಶಾಪ ಕೊಟ್ಟು ಸಮೀಪದಲ್ಲಿರುವ ಪ್ರಪಾತಕ್ಕೆ ಹಾರಿ ಪ್ರಾಣ ಕಳೆದುಕೊಂಡಳು. ಈ ರೀತಿ ಋಷಿ ಪತ್ನಿಯ ಶಾಪದಿಂದ ದುಃಖತಪ್ತಳಾದ ಕುಂಭಮುಖಿಯು ನಡೆದ ವಿಚಾರವನ್ನ ತನ್ನ ಪತಿಯಾದ ಖರನಿಗೆ ತಿಳಿಸಿದಳು. ಖರಸುರನು ಶಾಪವು ನಿವಾರಣೆಯಾಗಿ ಮಕ್ಕಳನ್ನು ಪಡೆಯಲು ಮುಂದೇನು ಮಾಡಬೇಕೆಂದು ಯೋಚಿಸಿ ತನ್ನ ಕುಲ ಪುರೋಹಿತರಾದ ಶುಕ್ರಾಚಾರ್ಯರಲ್ಲಿ ಮೊರೆಹೋದನು. ವಿಷಯವನ್ನು ತಿಳಿದ ಶುಕ್ರಾಚಾರ್ಯರು ಖರಸುರನಲ್ಲಿ ಮಾಯಸುರನಿಂದ ನಿರ್ಮಿತವಾದ ಜ್ಯೇಷ್ಠ ಲಿಂಗವನ್ನು ತಂದು ಒಂದು ವರ್ಷ ಪರ್ಯಂತ ದೀಕ್ಷಿತನಾಗಿ ಆ ಲಿಂಗವನ್ನು ಪೂಜಿಸಬೇಕೆಂದು, ಜೋತೆಗೆ ಕುಂಭಮುಖಿಯು ಕೂಡಾ ನಿಷ್ಠೆಯಿಂದ ಜಗದಂಬಿಕೆಯಾದ ಅಮೃತೇಶ್ವರೀ ದೇವಿಯನ್ನ ಪೂಜಿಸಬೇಕೆಂದು ತಿಳಿಸಿದರು.

ಖರಾಸುರನು ಮಾಯಾಸುರನಿದ್ದಲ್ಲಿಗೆ ಹೋಗಿ ಶುಕ್ರಾಚಾರ್ಯರು ಹೇಳಿದ ಆ ಜ್ಯೇಷ್ಠ ಲಿಂಗವನ್ನು ತಂದು, ಮನೋಹರವಾದ ಶುಕಪುರ ಎಂಬ ಸ್ಥಳದಲ್ಲಿ (ಗಿಳಿಯಾರು, ಹರ್ತಟ್ಟು) ಪ್ರತಿಷ್ಠಿಸಿದನಲ್ಲದೇ ಸಮೀಪದಲ್ಲಿಯೇ ಜಗನ್ಮಾತೆಯಾದ ಅಮೃತೇಶ್ವರೀ ದೇವಿಯನ್ನು ಪತಿಷ್ಠಿಸಿ ದಂಪತಿಗಳೀರ್ವರು ಶುಕ್ರಾಚಾರ್ಯರು ತಿಳಿಸಿದಂತೆ ಉಮಾಮಹೇಶ್ವರರನ್ನು ಪೂಜಿಸುತ್ತಿದ್ದರು.

ನಿದ್ರಾಹಾರಗಳನ್ನು ತ್ಯಜಿಸಿ ಅತ್ಯಂತ ಶ್ರದ್ಧೆಯಿಂದ ತಪಸ್ಸನ್ನಾಚರಿಸುತ್ತಿದ್ದ ದಂಪತಿಗಳಿಗೆ ಶಿವನು ಪ್ರತ್ಯಕ್ಷನಾಗಿ ಜ್ಞಾನೋಪದೇಶ ಮಾಡಿದನಲ್ಲದೇ " ಕೆಲವು ಕಾಲಗಳ ನಂತರ ಶ್ರೀ ಮಹಾವಿಷ್ಣುವಿನ ಅವತಾರ ರೂಪನಾದ ಶ್ರೀ ರಾಮಚಂದ್ರನು ಈ ದಂಡಕಾರಣ್ಯಕ್ಕೆ ಬಂದಾಗ ಅವನೊಡನೆ ಯುದ್ದ ಮಾಡಿ ಮುಕ್ತಿ ಹೊಂದುವಿ " ಎಂದು ವರವನ್ನು ಅನುಗ್ರಹಿಸಿ, ಅಲ್ಲಿಯವರೆಗೆ ಇದೇ ಸ್ಥಳದಲ್ಲಿ ನೀನು ಪ್ರತಿಷ್ಠಿಸಿದ ಜ್ಯೇಷ್ಠ ಲಿಂಗವನ್ನು ಅರ್ಚಿಸುತ್ತಾ ಇರು. ಅಲ್ಲದೇ ನಿನ್ನ ನಿತ್ಯಕರ್ಮಾನುಷ್ಠಾನಗಳ ಅನುಕೂಲಕ್ಕಾಗಿ ಸರ್ವತೀರ್ಥ ಸಾನಿಧ್ಯಾ ಉಳ್ಳ ಸರೋವರವನ್ನು ನಿರ್ಮಿಸುತ್ತೇನೆಂದು ತಿಳಿಸಿದನಲ್ಲದೇ ಈ ಸರೋವರದಲ್ಲಿ ಗಂಗಾದಿ ಸಕಲ ತಿರ್ಥಗಳು ಸನ್ನಿಹಿತವಾಗಿರುತ್ತವೆ. ಇನ್ನು ಮುಂದೆ ಈ ಸರೋವರವು " ವರುಣ ತೀರ್ಥವೆಂದು ಪ್ರಸಿದ್ದವಾಗಲಿ " ಎಂದು ಹರಸಿ ಅಂತರ್ಧಾನ ಹೊಂದಿದನು.

ಇದೇ ರೀತಿ ಕುಂಭಮುಖಿಯ ತಪಸ್ಸಿಗೂ ಮೇಚ್ಚಿದ ಅಮೃತೇಶ್ವರೀಯು ಪ್ರತ್ಯಕ್ಷಳಾಗಿ ಕುಂಭಮುಖಿಯಲ್ಲಿ " ಬೇಕಾದ ವರಗಳನ್ನು ಕೇಳು " ಎನ್ನಲು ದೇವಿಯ ದಿವ್ಯಸ್ವರೂಪದರ್ಶನದಿಂದ ಉಂಟಾದ ಸಂತೋಷಾತಿಶಯದಿಂದಲೂ ಋಷಿ ಪತ್ನಿಯ ಶಾಪ ಪ್ರಭಾವದಿಂದಲೂ ಭ್ರಾಂತಳಾಗಿದ್ದ ಕುಂಭಮುಖಿಯು ದೇವಿಯಲ್ಲಿ " ತಾಯೇ ನೀನು ನಿತ್ಯ ಯೌವನೆಯಾಗಿ ಶಿವನಂತಹ ಪುತ್ರರನ್ನು ಬಹಳ ಕಾಲದವರೆಗೆ ಪಡೆ " ಎಂದು ಬೇಡಿದಳು.

ಮಂದಸ್ಮಿತೆಯಾದ ಅಮೃತೇಶ್ವರೀ ದೇವಿಯು ತಥಾಸ್ತು ಎಂದಳು. ಅಲ್ಲದೇ ಕುಂಭಮುಖಿಯಲ್ಲಿ " ಋಷಿ ಶಾಪದಿಂದ ನಿನಗೆ ಮಕ್ಕಳನ್ನು ಪಡೆಯುವ ಭಾಗ್ಯವಿಲ್ಲದ ಕಾರಣದಿಂದಲೇ " ನಾನು ಮಕ್ಕಳನ್ನು ಪಡೆಯುವಂತೆ ಅನುಗ್ರಹಿಸು " ಎಂದು ಕೇಳುವ ಬದಲು " ನೀನು ಮಕ್ಕಳನ್ನು ಪಡೆ " ಎಂದು ಕೇಳಿಕೊಂಡಿರುತ್ತೀ. ಆದರೂ ಚಿಂತಿಸಬೇಡ... ಇನ್ನು ಕೆಲವೇ ಸಮಯದ ನಂತರ ಇಲ್ಲಿಗೆ ಆಗಮಿಸುವ ಶ್ರೀ ರಾಮಚಂದ್ರನಿಂದ ನಿನ್ನ ಪತಿಯಾದ ಖರಾಸುರನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆಗ ನೀನು ಕೂಡಾ ಅನಾಯಾಸವಾಗಿ ಇಲ್ಲಿಯೇ ನೆಲೆಸಿರುವ ನನ್ನಲ್ಲಿ ಐಕ್ಯವನ್ನು ಹೊಂದುವಿ. ಅನಂತರ ಇದೇ ಸ್ಥಲದಲ್ಲಿ ಶಿವಲಿಂಗ ಸದ್ರಶ್ಯವಾದ ಲಿಂಗಗಳು ಆಗಾಗ ಉತ್ಪತ್ತಿಯಾಗಿತ್ತವೆ. ಇವರೇ ನಿನ್ನ ಮಕ್ಕಳೆಂತ ತಿಳಿ. ಅನಂತರ ನಾನು " ಹಲವು ಮಕ್ಕಳ ತಾಯಿ " ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿದವಳಾಗಿ ಭಕ್ತರಿಗೆ ಅನುಗ್ರಹವನ್ನುಂಟು ಮಾಡುತ್ತಾ ಇಲ್ಲಿ ನೆಲೆಸಿರುತ್ತೇನೆ " ಎಂದು ತಿಳಿಸಿ ಅಲ್ಲಿಯೇ ಅಂತರ್ಧಾನ ಹೊಂದಿದಳು.

ಕೆಲವು ಕಾಲಗಳ ನಂತರ ಸೀತಾ ಸಹಿತನಾದ ಶ್ರೀ ರಾಮಚಂದ್ರನು ವನವಾಸಕ್ಕೆ ಬಂದಾಗ ಶೂರ್ಪನಖಿಯ ನಿಮಿತ್ತವಾಗಿ ಖರಾಸುರನಿಗೂ ಶ್ರೀ ರಾಮನಿಗೂ ಯುದ್ಧವಾಯಿತು. ಶಿವನ ವರಪ್ರಸಾದದಿಂದ ಶ್ರೀ ರಾಮನೇ ಮಹಾವಿಷ್ಣುವಿನ ಅವತಾರವೆಂದು ತಿಳಿದು ಖರಾಸುರನು ಯುದ್ಧ ಮಾಡಿ ಮುಕ್ತಿಯನ್ನು ಹೊಂದಿದನು. ಕುಂಭಮುಖಿಯು ಶ್ರೀ ದೇವಿಯನ್ನು ಧ್ಯಾನ ಮಾಡುತ್ತಾ ಅಮೃತೇಶ್ವರೀ ದೇವಿಯ ಸನ್ನಿಧಿಯಲ್ಲಿ ಐಕ್ಯ ಹೊಂದಿದಳು. ಅಂದಿನಿಂದ ಶ್ರೀ ಅಮೃತೇಶ್ವರೀ ದೇವಿಯನ್ನು " ಹಲವು ಮಕ್ಕಳ ತಾಯಿ " ಎಂದು ಕರೆಯಲಾರಂಭಿಸಿದರು. ಈಗ ಈ ಹೆಸರೇ ಪ್ರಸಿದ್ಧವಾಗಿದೆ.


- ಸ್ಥಳ ಮಹಾತ್ಮೆ ದೇವಸ್ಥಾನದಿಂದ ಪ್ರಕಟವಾದ ಅಧಾರದಿಂದ...

Amritheshwari Halavu makkala Thayee Temple, Kota, Kundapura, Karnataka - 576221 Ph : 0820 -2564681