ಈಗ ಒಬ್ಬಳೇ ಅರಬ್ಬೀ ತಟದಲ್ಲಿ ನನ್ನ ನೆನಪಿಸಿಕೊಂಡು ಹಿಂದೆ ಮೂಡಿದ ಹೆಜ್ಜೆಯನ್ನ ತಿರುಗಿ ನೋಡದೆ ನಡೆಯಿತ್ತಿರಬಹುದು ನೀನು ಅಲ್ವಾ...ಇಬ್ಬರಿದ್ದಾಗ ಇದ್ದ ಗಂಟೆಗಟ್ಟಲೆ ನಡೆತ ನಾನಿಲ್ಲ ಅಂತ ಈಗ ನಿಮಿಷಗಟ್ಟಲೆ ಯಾಗಿ ಪರಿವರ್ತನೆ ಗೊಂಡಿರಬಹುದೇನೋ..!ಹೇಯ್ ನಿಂಗೊತ್ತಾ ಇಲ್ಲಿಗೆ ಬರೋ ಮೊದಲು ಹೇಳ್ತಿದ್ನಲ್ಲಾ ಬೆಂಗಳೂರಲ್ಲಿ ಬೀಚ್ ಮಾತ್ರ ಇಲ್ಲವೇನೋ.. ಸಂಜೆ ಕಳೆಯೋದು ಬೇಸರವಾಗಬಹುದು ಅಂತ.. ಬೀಚ್ ಅಷ್ಟೇ ಅಲ್ಲ ,ಇಲ್ಲಿ ಏನೇನೂ ಇಲ್ಲ.. ಬೆಳಗ್ಗೆ ಎಳೋವಾಗ ದೇವಸ್ತಾನದ ಸುಪ್ರಭಾತ ಇಲ್ಲ, ಬಚ್ಚಲೊಲೆಯಲ್ಲಿ ಕುದಿಯುವ ನೀರಿಲ್ಲ,ತುಳಸಿಕಟ್ಟೆಗೆ ಇಡಲು ಕೆಂಪು,ಬಿಳಿ ದಾಸವಾಳ ಇಲ್ಲ ,ಬಾವಿ ಇಲ್ಲ ,ಕಾಲೇಜ್ ಮುಗ್ಸಿ ಸಂಜೆ ಬರೋವಾಗ ಪ್ರೀತಿಯಿಂದ ಬಾಲ ಅಲ್ಲಾಡಿಸೋ ನಾಯಿಮರಿ ಇಲ್ಲ, ಓಡಿಬಂದು ಕಾಲಿಗೆ ಮೈ ಒರೆಸುವ ಬಿಲ್ಲಿ ಇಲ್ಲ... ತೆಂಗಿನ ಗರಿಯ ಎಡೆಯಿಂದ ಕಾಣಿಸೋ ನಕ್ಷತ್ರ ಗಳಿಲ್ಲ..ದೂರದಲ್ಲೆಲ್ಲೋ ಊಳಿಡುವ ನರಿಗಳ ಶಬ್ದವಿಲ್ಲ. ...ನಗ್ತಾ ಇದ್ದೀಯ??ಇಲ್ಲ ತಾನೆ...!.?
ಇಲ್ಲಿ ದಿನಗಳು ಓಡ್ತಾ ಇವೆ.. ಅದೇ ಭಯ ನಂಗೆ.......ಸೋಮವಾರದಿಂದ ಶುಕ್ರವಾರ ಕ್ಯಾಬ್,ಲ್ಯಾಪ್ಟಾಪ್, ಮೈಲ್ಸ್,ಕ್ಯಾಫಿಟೇರಿಯ,ಟೀಂ ಲಂಚ್ ,ಮೀಟಿಂಗ್ ,friday ಫನ್ ,ಪರ್ಫಾರ್ಮನ್ಸ್ ,ಅವಾರ್ಡ್, ಹಾಯ್ ಬಾಯ್ ಹೆಲ್ಲೋಗಳಲ್ಲಿ ಕಳೆದುಹೋಗುತ್ತವೆ... ಬಿಟ್ಟೂ ಬಿಡದೆ ನಿಮ್ಮೆಲ್ಲರ ನೆನಪಾಗೋದು ಹೆಚ್ಚಾಗಿ ಇಂಥ ನೀರವ ಸಂಜೆಗಳಲ್ಲಿ. ಬದುಕನ್ನರಸಿ ಬೇರೆಡೆಗೆ ಬರುವವರ ಜೀವನ ಇಷ್ಟೇಯೇನೂ ಅನ್ನಿಸಿಬಿಡುತ್ತೆ..ಗದ್ದೆ,ತೋಟ ಕಾಡುಗಳು ಇಲ್ಲಿ ಯಾಕಿಲ್ವೋ...! ಅರಬ್ಬಿಯ ದೂರದ ಭೋರ್ಗೆರೆಯುವ ಸದ್ದು ಇಲ್ಲಿವರೆಗೆ ಯಾಕೆ ಕೇಳಲ್ವೋ...ಕಣ್ಣು ಹಾಯಿಸಿದಷ್ಟೂ ದೂರದ ಹಸಿರು ಇಲ್ಲಿ ಯಾಕಿಲ್ವೋ...?! ಇರಲಿ ಬಿಡು..ಅದೆಲ್ಲ ಇದ್ದಿದ್ದರೆ ಇದು ಸಿಲಿಕಾನ್ ಸಿಟಿ ಆಗಿರ್ತಿರಲಿಲ್ಲವೇನೋ...! ಅಲ್ವಾ!
ಮತ್ತೆ ನಿಂಗೊತ್ತಾ...ಇಲ್ಲಿನ ಫಜೀತಿಗಳು... ಮೆಜೆಸ್ಟಿಕ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣ ಎರಡೂ ಒಂದೇ ಅಂತ ನಂಗೆ ಗೊತ್ತೇ ಇರ್ಲಿಲ್ಲ.. ಗೊತ್ತಾಗೋವಷ್ಟರಲ್ಲಿ ದಿನ 4 ಕಳೆದಿತ್ತು... ಇನ್ನು ನಮ್ಮ ಟೀಮ್ ನಲ್ಲಿ ಇರುವ 20 ಜನರಲ್ಲಿ ನಾನೊಬ್ಬಳೆ ಕರ್ನಾಟಕದವಳು.. logout ಆಗಿ ಹೋಗುವಾಗ ಕನ್ನಡ ಮರೆತು ಹೋಯಿತೇನೋ ಅನ್ನಿಸಿರುತಿತ್ತು.. ಈ ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಬಿಟ್ಟು ಉಳಿದೆಲ್ಲ ಭಾಷೆಗಳಿವೆ..!
ಮತ್ತೆ ಇಲ್ಲಿನ ಜನರ ಬಗ್ಗೆ ಕೇಳ್ತಿಯಾ? ಅಲ್ಲೆಲ್ಲೋ ರೈನ್ ಡಾನ್ಸ್ ಮಾಡಿ ಖುಷಿನ "ಕೊಂಡುಕೊಳ್ಳುವ " ಪಕ್ಕದ ಮನೆಯ ಫ್ಯಾಮಿಲಿ ,ನಾನು ಮಳೆ ಬಂದಾಗ ಟೆರೇಸ್ ಮೇಲೆ ಹೋಗಿ ನೆನೆಯುದನ್ನು ನೋಡಿ ನಗುತ್ತಾವೆ.. ಅಜ್ಜಿ ಹೊಲಿಸಿಕೊಟ್ಟ ರೇಷ್ಮೆ ಲಂಗ ಬ್ಲೌಸು ಹಾಕಿಕೊಂಡರೆ ಮೇಲಿಂದ ಕೆಳಗಿನವರೆಗೆ ವಿಚಿತ್ರವಾಗಿ ನೋಡುವ ಓನರ್ ನ ಮಗಳು ಮಾರ್ಕೆಟ್ಗೆ ಸ್ಕೂಟಿಯಲ್ಲಿ ಹೋಗೋದು ತೋಳಿಲ್ಲದ ನೈಟಿಯಲ್ಲೇ..ನಿನ್ನೆ ಆಫೀಸಲ್ಲಿ ಟ್ರೈನಿಂಗ್ ಕೊಡುತ್ತಿದ್ದ ಸೀನಿಯರ್ ಅದೂ ಇದು ಮಾತಾಡುತ್ತ ಸಡನ್ ಆಗಿ ಯೂ ಡೋಂಟ್ ಹ್ಯಾವ್ ಏನೀ ಬಾಯ್ ಫ್ರೆಂಡ್ ? ಅಂತ ನಿಂಗೆ ಕೈ ಕಾಲಿಲ್ವ ಅನ್ನೋ ರೆಂಜಲ್ಲಿ ಕೇಳಿದ್ದಳು.. ಅವಳ ಮುಖ ನೋಡಿ ನಗುತ್ತ ಕೇಳಿದ್ದೆ..ನೋ ...ಬಟ್ ವಾಟ್ ಡು ಯೂ ಮೀನ್ ಬೈ "ಏನೀ" ಅಂತ.! ಅವಳು.ಪೆದ್ದು ಪೆದ್ದಾಗಿ ನಕ್ಕು ಯು ಆರ್ ಸೊ ಕ್ಯೂಟ್ ಅಂತ ಕೆನ್ನೆ ಹಿಂಡಿ ಅಲ್ಲಿಂದ ಸರಿದಿದ್ಲು.. ಇಲ್ಲಿ ಜನರೂ ಮರಳು ಜಾತ್ರೆಯೂ ಮರಳು... !
ಹ್ಮ್… ಆಗೆಲ್ಲಾ ಪ್ರತಿ ಕ್ಷಣ ಮಿಸ್ ಮಾಡ್ಕೊಂಡಿದ್ದು ನಿನ್ನನ್ನೇ..ಛೆ ,ನೀನು ಜೊತೇಲ್ ಇರಬೇಕಿತ್ತು ಅಂತ...ಇಲ್ಲಿಗೆ ಬರೋ ಮುಂಚಿನ ದಿನ ಮಲ್ಪೆ ಬೀಚಿನ ಅಲೆಗಳು ಕಾಲನ್ನು ತೊಯಿಸುತ್ತಿದ್ದರೆ ನೀನು ನನ್ನ ಭುಜಕ್ಕೊರಗಿ ಕಣ್ಣೀರಾಗಿಬಿಟ್ಟಿದ್ದೆ ..ನಂಗೊತ್ತು ಕಣೆ ಇನ್ನು ಆ ಕಾಲ ಬರೋದಿಲ್ಲ. ಇಲ್ಲಿ ಹೆವಿ ವರ್ಕ್,ವೀಕೆಂಡ್ ಕ್ಲಾಸ್ ಅಂತ ಹಳೆಯ ನೆನಪುಗಳು ಒಂದೊಂದಾಗಿ ಕಮ್ಮಿ ಆಗಬಹುದೇನೋ...ಟೀಂ ಔಟಿಂಗ್ ,ಟ್ರೆಕ್ಕಿಂಗ್ ಅಂತ ಅಲ್ಲಿನ ಗುಡ್ಡ,ಕಾಡಿನ ದಾರಿ ಮರೆತುಹೊಗಬಹುದೇನೋ.. ನನ್ನ ರೂಂ ನ ಕಿಟಕಿಯಲ್ಲಿಟ್ಟ ನಾವು ಹೆಕ್ಕಿ ತಂದ ಕಪ್ಪೆ ಚಿಪ್ಪುಗಳಿಗೆ ಧೂಳು ಹಿಡಿಯಬಹುದೇನೋ... ನೀ ಕೊಟ್ಟ ಕಾಲ್ಗೆಜ್ಜೆ ಶೂಸ್ ಜೀನ್ಸ್ ಜೊತೆ ಹೊಂದಿಕೊಳ್ಳದೆ ಬೇರೆಯಾಗಬಹುದೇನೋ... ..,ನೀ ಇಟ್ಟ ಮೆಹಂದಿ ಮಸುಕಾದಂತೆ ಊರಿನ ಹಾತೊರೆಯುವಿಕೆ ಕರಗಬಹುದೇನೋ ....
ಹಾಗಾಗಲ್ಲ ಅಲ್ವಾ............?!
ಇಬ್ಬರಿಗೂ ಗೊತ್ತು ಮಾತುಗಳು ಮುಗಿಯದಷ್ಟಿವೆ..ನಾ ಬಂದಾಗ ಹೇಳಿಬಿಡು ಕಡಲ ಕಿನಾರೆಗೆ ಹೋಗಲೇ ಇಲ್ಲ ಅಂತ ..ಮತ್ತೆ ಪಕ್ಕದ ಮನೆಯ ಟೀಪು ನಾ ಬಂದಾಗ ಒಂದು ಸಲ ಬೊಗಳಿಬಿಡಬಹುದೇನೋ...ಬಿಲ್ಲಿ ಈಗ ಯಾರದ್ದೂ ಹಾಸಿಗೆಯ ಹಂಗಿಲ್ಲದೆ ಒಂದೇ ಒಲೆಯ ಮೂಲೆಯಲ್ಲಿ ಮಲಗುವುದ ಅಭ್ಯಾಸ ಮಾಡಿಕೊಂಡಿರಬಹುದೇನೋ. ಮರೆಗುಳಿ ಅಜ್ಜ ,ಇವತ್ತು ವಾಣಿ ಈ ಕಡೆ ಬಂದೆ ಇಲ್ಲ ಅಂತ ದಿನವೂ ಹೇಳುತ್ತಿರಬಹುದೇನೋ…!ತೋಟದಲ್ಲಿದ್ದ ಒಂಟಿ ಬೆಟ್ಟದಾವರೆ ಗಿಡದ ತುದಿಯಲ್ಲಿರುವ ಹೂವುಗಳು ಕೀಳಲು ಎಟುಕದೆ ಹಾಗೆ ಬಾಡಿ ಬಿದ್ದಿರಬಹುದೇನೋ...ದೊಡ್ಡ ಧೂಪದ ಮರದ ಅಡಿಯಲ್ಲಿ ಕೂತುಕೊಳ್ಳುವವರಿಲ್ಲದೆ ಅಲ್ಲಿ ತರಗಲೆಯ ರಾಶಿ ಬಿದ್ದಿರಬಹುದೇನೋ... ತೋಟದ ಕೆರೆಯಲ್ಲಿ ಇಳಿಯುವವರಿಲ್ಲದೆ ಇವತ್ತಿನವರೆಗೂ ನೀರು ತಿಳಿಯಾಗಿಯೇ ಇದ್ದಿರಬಹುದೇನೋ .. .…ಹಿತ್ತಿಲ ಮುಳ್ಳಿನ ಗಿಡ ಪಕ್ಕದಲ್ಲಿದ್ದ ನಿಂಬೆಗಿಡಕ್ಕಿಂತ ಎತ್ತರಕ್ಕೆ ಬೆಳೆದಿರಬಹುದೇನೋ……
ಇಲ್ಲ ಅಂತ ಒಂದು ಸಲ ಸುಳ್ಳು ಹೇಳ್ಬಿಡೆ ಪ್ಲೀಸ್ .....!
ಅಲ್ಲಿಯದೇ ನೆನಪಿನಲ್ಲಿ...
ವಾಣಿ :(
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ