ಪುಟಗಳು

ಮಂಗಳವಾರ, ಡಿಸೆಂಬರ್ 29, 2009

ಪ್ರತಾಪ್ ಹೇಳುತಾರೆ.............


“ಸಚಿನ್ ತೆಂಡೂಲ್ಕರ್‌ನನ್ನು ನಾನು ಮೊದಲ ಬಾರಿಗೆ ಟಿವಿ ಪರದೆ ಮೇಲೆ ನೋಡಿದ್ದು 1992ರಲ್ಲಿ. ಅದು ವಿಶ್ವಕಪ್ ಪಂದ್ಯಾವಳಿ. ನಾನಾಗ ೭ನೇ ತರಗತಿಯಲ್ಲಿದ್ದೆ. ಪರೀಕ್ಷೆ ನಡೆಯುತ್ತಿತ್ತು. ಚಕ್ಕರ್ ಹೊಡೆದಿದ್ದೆ. ಏಕೆಂದರೆ ವಿಶ್ವಕಪ್ ನಡೆಯುತ್ತಿದ್ದುದು ಆಸ್ಟ್ರೇಲಿಯಾದಲ್ಲಿ. ಪಂದ್ಯಗಳು ಬೆಳಗಿನ ಜಾವ ಪ್ರಾರಂಭವಾಗುತ್ತಿದ್ದವು. ಸ್ಕೂಲ್ ಟೈಮಿಗೂ ಕ್ರಿಕೆಟ್ ಮ್ಯಾಚುಗಳಿಗೂ ಮಧ್ಯೆ ಸಮಯ ಹೊಂದಾಣಿಕೆ ಯಾಗುತ್ತಿರಲಿಲ್ಲ. ಹಾಗಾಗಿ ಪರೀಕ್ಷೆಗೆ ಶರಣುಹೊಡೆದಿದ್ದೆ. ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡುತ್ತಿದ್ದ ವಿಧಾನ ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನೆನಪಿನ ಬುತ್ತಿಯೊಳಗೆ ಇನ್ನೂ ಹಸಿಹಸಿಯಾಗಿದೆ. ನಜಾಫ್‌ಗಢದ ನಮ್ಮ ಹಳೇ ಮನೆಯಲ್ಲಿ ಕೈಯಲ್ಲಿ ಬ್ಯಾಟ್ ಎತ್ತಿಕೊಂಡು, ಟಿವಿ ಮುಂದೆ ನಿಂತುಕೊಂಡು, ಆತನ ಆಟದ ಶೈಲಿಯನ್ನು ಅನುಕರಣೆ ಮಾಡಲಾರಂಭಿಸಿದೆ. ನನ್ನ ದೇಹವನ್ನು ಸ್ಥಿರವಾಗಿಟ್ಟುಕೊಂಡು, ಶಿರವನ್ನೂ ನೆಟ್ಟಗೆ ನೆಟ್ಟುಕೊಂಡು, ಸಚಿನ್‌ನಂತೆ ಸ್ಟ್ರೈಟ್‌ಡ್ರೈವ್ ಮಾಡಲು ಅಥವಾ ಬ್ಯಾಕ್‌ಫುಟ್‌ನಲ್ಲಿ ನಿಂತು ಪಂಚ್ ಮಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿರಲಿಲ್ಲ”.
“1993&94ರ ಸಾಲಿನಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ಮಾಡಿತು. ಮ್ಯಾಚುಗಳು ನಡುರಾತ್ರಿ ಆರಂಭವಾಗುತ್ತಿದ್ದವು. ಆ ಸಮಯಕ್ಕೆ ಎದ್ದು ಟಿವಿ ಹಾಕಿಕೊಂಡು ನೆರೆಹೊರೆಯವರಿಗೆಲ್ಲ ತೊಂದರೆ ಕೊಡುತ್ತಿದ್ದೆ. ಅಷ್ಟೆಲ್ಲಾ ಮಾಡುತ್ತಿದ್ದುದು ಸಚಿನ್ ಆಟ ನೋಡುವುದಕ್ಕಾಗಿ. ಆತ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮೊಟ್ಟಮೊದಲ ಬಾರಿಗೆ ಆಡಿದ್ದೇ ನ್ಯೂಜಿಲೆಂಡ್ ಸರಣಿಯಲ್ಲಿ. ಕಾಲ ಉರುಳುತ್ತಾ ಬಂತು, ನಾನು ಸಚಿನ್‌ನ ಕ್ರೀಡಾ ಜೀವನವನ್ನು ಹಿಂಬಾಲಿಸುತ್ತಲೇ ಬಂದೆ. ಅದರಲ್ಲೂ ಭಾರತದ ತಂಡ ಸೇರಿದ ನಂತರ ಆತನ ಬಹುತೇಕ ಎಲ್ಲ ಇನಿಂಗ್ಸುಗಳನ್ನೂ ನೋಡಿದ್ದೇನೆ. ನಾವಿಬ್ಬರೂ ಬಲುದೂರ ಬಂದಿದ್ದೇವೆ. ‘ನಾನು ಒಬ್ಬ ಬ್ಯಾಟ್ಸ್ ಮನ್ ಆಗಿ ಹೆಚ್ಚೂಕಡಿಮೆ ಆತನ ಶೈಲಿಯನ್ನು ಹೋಲುತ್ತೇನೆ’ ಎಂದು ಸ್ವತಃ ತೆಂಡೂಲ್ಕರ್ ಹೇಳಿದರು. ಅದಕ್ಕಿಂತ ದೊಡ್ಡ ಗೌರವ ಇನ್ನೇನು ಬೇಕು? ಕನಸು ನಿಜವಾಗಿದೆ ಎನಿಸುತ್ತದೆ. ಒಂದು ವೇಳೆ ನಾನು ನಾಳೆಯೇ ಸತ್ತರೂ ಖುಷಿಯಿಂದಲೇ ಸಾಯುತ್ತೇನೆ. ಏಕೆಂದರೆ ನಾನು ಕ್ರಿಕೆಟ್ ಆಡಿದ್ದೇ ತೆಂಡೂಲ್ಕರ್‌ನಿಂದಾಗಿ ಹಾಗೂ ನನ್ನಂತೆಯೇ ಆಡುತ್ತೀಯಾ ಎಂದು ಸ್ವತಃ ತೆಂಡೂಲ್ಕರ್ ಅವರಿಂದಲೇ ಹೇಳಿಸಿಕೊಳ್ಳುವುದಕ್ಕಿಂತ ದೊಡ್ಡ ಮೆಚ್ಚುಗೆ ಯಾವುದಿದೆ?”
ಮೂರ್ನಾಲ್ಕು ತಿಂಗಳ ಹಿಂದೆ ‘ಕ್ರಿಕ್‌ಇನ್ಫೋ ಡಾಟ್‌ಕಾಂ’ನಲ್ಲಿ ಪ್ರಕಟವಾಗಿದ್ದ ಇಂತಹ ತುಣುಕನ್ನು ಓದುವಾಗ ಒಂದು ಕ್ಷಣ ಕಣ್ಣನ್ನೇ ನಂಬುವುದು ಕಷ್ಟವಾಯಿತು!
ಅಷ್ಟಕ್ಕೂ ಹಾಗಂತ ಹೇಳಿದವನು ಒಬ್ಬ ಸಾಮಾನ್ಯ ಸಾಧಕನಾಗಿರಲಿಲ್ಲ. ಆ ಮೆಂಡಿಸ್‌ಗೆ, ಮುರಳಿಗೆ, ಮೆಗ್ರಾಥ್‌ಗೆ, ಶೋಯೆಬ್ ಅಖ್ತರ್‌ಗೆ, ಬ್ರೆಟ್ ಲೀಗೆ ಚೆನ್ನಾಗಿ ಬಾರಿಸಲು ಅವನೇ ಸರಿ ಎಂದು ನಾವೆಲ್ಲ ಹೇಳುವ ವೀರೇಂದ್ರ ಸೆಹವಾಗ್! ಹಿಂದೆಲ್ಲಾ ಟೆಸ್ಟ್ ಮ್ಯಾಚ್ ಪ್ರಾರಂಭವಾಯಿತೆಂದರೆ ಮೊದಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾಗುವುದನ್ನೇ ಕಾದುನೋಡುತ್ತಾ ಕುಳಿತಿರುತ್ತಿದ್ದೆವು. ಸಚಿನ್‌ನ ಆಟ ನೋಡುವ ತವಕ ಹಾಗಿರುತ್ತಿತ್ತು. ಆನೆ ತೂಕದ ಆತನ ಬ್ಯಾಟ್‌ನಿಂದ ಹೊರಹೊಮ್ಮುತ್ತಿದ್ದ ಕವರ್‌ಡ್ರೈವ್, ಸ್ಟ್ರೈಟ್‌ಡ್ರೈವ್‌ಗಳು ಅಷ್ಟು ಮುದಕೊಡುತ್ತಿದ್ದವು. ಇವತ್ತು ಆರಂಭಿಕ ಬ್ಯಾಟ್ಸ್‌ಮನ್ ಸೆಹವಾಗ್ ಇದ್ದರಷ್ಟೇ ಟೆಸ್ಟ್ ಮ್ಯಾಚನ್ನೂ ನೋಡ ಬಹುದು ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕದಿನ, 20:20 ಮ್ಯಾಚ್‌ಗಳ ಅಬ್ಬರದಲ್ಲೂ ಟೆಸ್ಟ್ ಮ್ಯಾಚನ್ನು ನೋಡುವಂತೆ ಮಾಡಿದ್ದಾನೆ. ಸ್ವತಃ ಒಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್ ಆದರೂ ಏಕಲವ್ಯನಂತೆ ತನ್ನೆಲ್ಲ ಏಳಿಗೆಗೆ ಗುರು ತೆಂಡೂಲ್ಕರ್‌ನೇ ಕಾರಣ ಎನ್ನುವ, ನಾನು ಕ್ರಿಕೆಟ್ ಆಡಿದ್ದೇ ಆತನಿಂದಾಗಿ ಎನ್ನುವ ವೀರೇಂದ್ರ ಸೆಹವಾಗ್‌ನ ವಿನಮ್ರತೆಗೊಂದು ಸಲಾಮು.
ಸಚಿನ್-ಸೆಹವಾಗ್ ಸಂಬಂಧ ಗುರು-ಶಿಷ್ಯನ ಬಾಂಧವ್ಯವನ್ನು ಮೀರಿ ಸಾಗುತ್ತದೆ.
ಅದು 2004, ಮಾರ್ಚ್ 29. ಮುಲ್ತಾನ್‌ನಲ್ಲಿ ಭಾರತ- ಪಾಕ್ ನಡುವೆ ಮೊದಲ ಟೆಸ್ಟ್ ನಡೆಯುತ್ತಿತ್ತು. ಸೆಹವಾಗ್-ಸಚಿನ್ ಜತೆಗೂಡಿ ಆಡುತ್ತಿದ್ದರು. ಆ ಪಂದ್ಯದಲ್ಲಿ ಸೆಹವಾಗ್ ಮೊದಲ ತ್ರಿಶತಕ ಬಾರಿಸಿದ. ಪ್ರತಿಬಾರಿ ಸೆಹವಾಗ್ ೯೦ರ ಗಡಿದಾಟಿದಾಗಲೂ ಹತ್ತಿರಕ್ಕೆ ಬರುತ್ತಿದ್ದ ತೆಂಡೂಲ್ಕರ್, ‘ಸಿಕ್ಸ್ ಏನಾದರೂ ಹೊಡೆಯಲು ಯತ್ನಿಸಿದರೆ ನಿನ್ನ ತಿಕದ ಮೇಲೆ ಹೊಡೆಯುತ್ತೇನೆ’ ಎಂದು ಗದರಿಸುತ್ತಿದ್ದ. ಅದನ್ನು ಸೆಹವಾಗ್ ಈ ರೀತಿ ನೆನಪಿಸಿಕೊಳ್ಳುತ್ತಾನೆ-“ಬ್ಯಾಟಿಂಗ್ ವೇಳೆ ಮಾತುಕತೆ ನಡೆಸುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು ಸಚಿನ್‌ಗೆ ಇಷ್ಟ. ಕೆಲವೊಮ್ಮೆ ಗಂಭೀರವದನನಾಗಿ ಸಲಹೆ, ಸೂಚನೆ, ಎಚ್ಚರಿಕೆಯನ್ನೂ ಕೊಡುತ್ತಾನೆ. ಅವತ್ತು ಇಡೀ ದಿನ ನಾವಿಬ್ಬರೂ ಜತೆಯಾಗಿ ಆಡಿದೆವು. ನೋಡು… 2003ರಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್‌ನಲ್ಲಿ 195 ರನ್ ಗಳಿಸಿದ್ದಾಗ ನೀನು ಸಿಕ್ಸ್ ಹೊಡೆಯಲು ಯತ್ನಿಸಿ ಔಟಾದೆ. ಹಾಗಾಗಿ ಅದುವರೆಗೂ ಉತ್ತಮ ಸ್ಥಿತಿಯಲ್ಲಿದ್ದರೂ ಭಾರತ ಒಳ್ಳೆಯ ಸ್ಕೋರ್ ಗಳಿಸದೆ, ಪಂದ್ಯವನ್ನೇ ಸೋಲಬೇಕಾಗಿ ಬಂತು. ಹಾಗೆಂದು ನನ್ನ ತಪ್ಪನ್ನು ಮನವರಿಕೆ ಮಾಡಿಕೊಟ್ಟ. ಈ ಬಾರಿಯೂ ಸಿಕ್ಸ್ ಹೊಡೆಯಲು ಯತ್ನಿಸಿದರೆ ತಿಕಕ್ಕೆ ಹೊಡೆಯುತ್ತೇನೆ ಎಂದು ಗದರಿಸಿಯೂ ಬಿಟ್ಟ. ನಾನು ಆ ಟೆಸ್ಟ್‌ನಲ್ಲಿ ೯೦ರ ಗಡಿಯಲ್ಲಿ ಸಿಕ್ಸ್ ಹೊಡೆಯಲೇ ಇಲ್ಲ. ಆದರೆ 300 ರನ್ ಹತ್ತಿರಕ್ಕೆ ಬಂದಾಗ ತಡೆದುಕೊಳ್ಳಲಾಗಲಿಲ್ಲ. ಸಚಿನ್ ಬಳಿಗೆ ಹೋಗಿ, ನೀನು ಬೇಕಾದರೆ ನನ್ನ ತಿಕಕ್ಕೆ ಹೊಡೆ. ಆದರೆ ನಾನು ಸಿಕ್ಸ್ ಹೊಡೆಯುವುದು ಹೊಡೆಯುವುದೇ ಎಂದೆ. ಹಾಗೆಯೇ ಸಕ್ಲೇನ್ ಮುಷ್ತಾಕ್ ಬಾಲಿಗೆ ಸಿಕ್ಸ್ ಹೊಡೆದು ಮೊದಲ ಟ್ರಿಪಲ್ ಸೆಂಚುರಿ ಮುಗಿಸಿದೆ”!!
ಎರಡು ಬಾರಿ ಟ್ರಿಪಲ್ ಸೆಂಚುರಿ ಹೊಡೆದಿರುವ, ಮೂರನೆಯ ದ್ದನ್ನು ನಿನ್ನೆ ಶುಕ್ರವಾರ 7 ರನ್‌ಗಳ ಅಂತರದಿಂದ ಕಳೆದುಕೊಂಡಿರುವ ವೀರೇಂದ್ರ ಸೆಹವಾಗ್ ಟ್ರಿಪಲ್ ಸೆಂಚುರಿ ಬಾರಿಸಿರುವ ಏಕೈಕ ಭಾರತೀಯ. ಎರಡು ಬಾರಿ ಟ್ರಿಪಲ್ ಸೆಂಚುರಿ ಬಾರಿಸಿರುವವರು ಡಾನ್ ಬ್ರಾಡ್ಮನ್ ಹಾಗೂ ಬ್ರಯಾನ್ ಲಾರಾ ಬಿಟ್ಟರೆ ಸೆಹವಾಗ್ ಮಾತ್ರ. ಆತನ ಆರಾಧ್ಯದೈವ ಸಚಿನ್‌ಗೂ ಸಾಧ್ಯವಾಗದ ಸಾಧನೆಯನ್ನು ಸೆಹವಾಗ್ ಮಾಡಿದ್ದಾನೆ. ಆತನ ಆಟವನ್ನು ಧೈರ್ಯ ಅನ್ನಬೇಕೋ, ಹುಚ್ಚಾಟಿಕೆ ಅಂತ ಕರೆಯಬೇಕೋ ಗೊತ್ತಾಗುವುದಿಲ್ಲ, ಆದರೆ ಸೆಹವಾಗ್ ಇದ್ದರೆ ಟಾರ್ಗೆಟ್ ೫೦೦ ರನ್‌ಗಳಾದರೂ ಬೆನ್ನಟ್ಟಬಹುದು ಎಂಬ ಆತ್ಮವಿಶ್ವಾಸವನ್ನು ದೇಶವಾಸಿಗಳ ಮನದಲ್ಲಿ ತುಂಬಿದ್ದಾನೆ. ಲಹರಿಯಲ್ಲಿರುವಾಗ ಸೆಹವಾಗ್‌ನನ್ನು ಯಾರಿಗೂ ಕಟ್ಟಿಹಾಕಲು ಸಾಧ್ಯವಿಲ್ಲ. ವಿಕೆಟ್ ಕೊಟ್ಟಾನು, ಆದರೆ ಸುಮ್ಮನೆ ಕುಟ್ಟುವವನಲ್ಲ. ಸಾಮಾನ್ಯವಾಗಿ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳನ್ನು ಕೆಣಕುತ್ತಾರೆ, ಬಾ… ಹೊಡೆ ನೋಡೋಣ ಎಂದು ಪ್ರಚೋದಿಸುತ್ತಾರೆ. ಆದರೆ ಸೆಹವಾಗ್‌ನನ್ನು ಯಾರಾದರೂ ಒಂದೇ ಕಡೆ ಬಾಲ್ ಹಾಕಿ ಕಟ್ಟಿಹಾಕಲು ಪ್ರಯತ್ನಿಸಿದರೆ ಆತನೇ ಬೌಲರ್‌ಗೆ ಸವಾಲು ಹಾಕುತ್ತಾನೆ.
ಆತ ಎರಡನೇ ಟ್ರಿಪಲ್ ಸೆಂಚುರಿ ಬಾರಿಸಿದಾಗ ಇಂಥದ್ದೇ ಒಂದು ಘಟನೆ ನಡೆಯಿತು.
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಮ್ಯಾಚ್ ನಡೆಯುತ್ತಿತ್ತು. ಆರುನೂರು ಚಿಲ್ಲರೆ ರನ್ ಬೆನ್ನುಹತ್ತಿ ಹೊರಟಿದ್ದ ಭಾರತ ಸೆಹವಾಗ್‌ನ ಅದ್ಭುತ ಆಟದ ಬಲದಿಂದ ಉತ್ತಮ ಸ್ಥಿತಿಯಲ್ಲೇ ಇತ್ತು. ಸೆಹವಾಗ್ 291ರಲ್ಲಿದ್ದ. ಆತನನ್ನು ಕಟ್ಟಿಹಾಕಲೇಬೇಕು ಎಂಬ ಉದ್ದೇಶದಿಂದ ದಕ್ಷಿಣ ಆಫ್ರಿಕಾದ ನಾಯಕ ಗ್ರಹಾಂ ಸ್ಮಿತ್, ಪಾಲ್ ಹ್ಯಾರಿಸ್‌ರಿಂದ ನೆಗೆಟಿವ್ ಲೈನ್‌ನಲ್ಲೇ ಬೌಲಿಂಗ್ ಮಾಡಿಸತೊಡಗಿದರು. ಆ ಮೂಲಕ ಸೆಹವಾಗ್‌ನನ್ನು ಹತಾಶೆಗೊಳಿಸಲು ಮುಂದಾದರು. ಬಾಲ್‌ಗಳು ಪ್ಯಾಡ್‌ಗೆ ಬಡಿಯಲಾರಂಭಿಸಿದವು. ಹೀಗೇ ಬೌಲಿಂಗ್ ಮಾಡುತ್ತಿದ್ದರೆ ಟ್ರಿಪಲ್ ಸೆಂಚುರಿ ಪೂರ್ಣಗೊಳಿಸಲು ಇನ್ನೂ 10-15 ನಿಮಿಷ ಬೇಕಾಗುತ್ತದೆ ಎಂದು ಭಾವಿಸಿದ ಸೆಹವಾಗ್, ‘ನೀನು ರೌಂಡ್ ದಿ ವಿಕೆಟ್ ಬಂದು ಬಾಲ್ ಹಾಕಿದರೆ ಮೊದಲ ಬಾಲಿಗೇ ಸಿಕ್ಸ್ ಹೊಡೆಯುತ್ತೇನೆ’ ಎಂದು ಪಾಲ್ ಹ್ಯಾರಿಸ್‌ಗೆ ಸವಾಲು ಹಾಕಿದ. ಆತ ಕೂಡ ಸವಾಲು ಒಪ್ಪಿಕೊಂಡು ರೌಂಡ್ ದಿ ವಿಕೆಟ್ ಬಾಲ್ ಹಾಕಿದ, ಸೆಹವಾಗ್ ಚೆಂಡನ್ನು ಬೌಲರ್ ತಲೆಮೇಲೆತ್ತಿ ಸಿಕ್ಸ್ ಹೊಡೆದ! ಕೆಲ ಕ್ಷಣಗಳಲ್ಲೇ ಟ್ರಿಪಲ್ ಸೆಂಚುರಿ ಕೂಡ ಪೂರೈಸಿದ.
ಆತನನ್ನು ಕಿಚಾಯಿಸಿ ಗೂಸಾ ತಿಂದು ಮೆಚ್ಚುಗೆ ಸೂಚಿಸಿದ ಬೌಲರ್‌ಗಳೂ ಇದ್ದಾರೆ.
ಮೊದಲ ತ್ರಿಶತಕ ಹೊಡೆದ ಮುಲ್ತಾನ್ ಟೆಸ್ಟ್‌ನಲ್ಲಿ ಆಡುತ್ತಿರುವಾಗ, “ಬರೀ ಥರ್ಡ್ ಮ್ಯಾನ್‌ನಲ್ಲೇ ಏಕೆ ಹೊಡೆಯುತ್ತೀಯಾ?” ಎಂದು ಶೋಯೆಬ್ ಅಖ್ತರ್ ಕಿಚಾಯಿಸಿದರು. ಅಂದರೆ ಆ ಶಾಟ್ ಬಿಟ್ಟರೆ ಬೇರಾವುವೂ ಗೊತ್ತಿಲ್ಲವೆ ಎಂಬಂತಿತ್ತು ಅಖ್ತರ್ ಪ್ರಶ್ನೆ. ಮುಂದಿನ ಬಾಲನ್ನು ಸ್ಟ್ರೈಟ್ ಡ್ರೈವ್ ಮಾಡಿ ಬೌಂಡರಿಗಟ್ಟಿದ ಸೆಹವಾಗ್, “ಅದು ಒಳ್ಳೆಯ ಹೊಡೆತ ಎಂಬುದನ್ನು ನೀನಿಗ ಒಪ್ಪಿಕೊಳ್ಳಲೇಬೇಕು” ಎಂದಾಗ ಶೋಯೆಬ್ ಅಖ್ತರ್ ತಲೆಯಾಡಿಸಿ ಹೋಗಿದ್ದರು. ಸೆಹವಾಗ್ ಹೇಗೆ ಯೋಚಿಸುತ್ತಾನೆ ಎಂಬುದನ್ನು ಮಾಜಿ ನಾಯಕ ಸೌರವ್ ಗಂಗೂಲಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದರು.
“ಸೆಹವಾಗ್‌ನ ತಲೆ ಹೇಗೆ ವರ್ಕ್ ಆಗುತ್ತಿರುತ್ತದೆ ಎಂಬುದನ್ನು ತಿಳಿಯಬೇಕೆಂದರೆ ಭಾರತ ಬ್ಯಾಟಿಂಗ್ ಮಾಡುತ್ತಿರುವಾಗ ಪೆವಿಲಿಯನ್‌ನಲ್ಲಿ ಸೆಹವಾಗ್ ಪಕ್ಕ ಕುಳಿತುಕೊಳ್ಳಿ… ಪ್ರತಿಕ್ಷಣಕ್ಕೂ, ‘ಚೌಕಾ ಗಯಾ’… ‘ಛಕ್ಕಾ ಗಯಾ’… ಎಂದು ತಲೆಯಾಡಿಸುತ್ತಾ ಇರುತ್ತಾನೆ. ಅಂದರೆ ಆತನ ಪ್ರಕಾರ ಬೌಂಡರಿಗೆ, ಸಿಕ್ಸರ್‌ಗೆ ಹೊಡೆ ಯಬಹುದಾದ ಬಾಲಿನ ಲಾಭ ಪಡೆಯಲು ಬ್ಯಾಟ್ಸ್‌ಮನ್ ವಿಫಲನಾದಾಗ ಅಯ್ಯೋ… ಫೋರ್ ಮಿಸ್ಸಾಯ್ತು, ಸಿಕ್ಸ್ ಮಿಸ್ಸಾಯ್ತು ಎಂದು ತನ್ನ ನಿರಾಸೆ ವ್ಯಕ್ತಪಡಿಸುತ್ತಿರುತ್ತಾನೆ”.
ಸೆಹವಾಗ್ ಆಡುವುದೇ ಹಾಗೆ. ಇವತ್ತು ಆತ ಎರಡು ಟ್ರಿಪಲ್, 6 ಡಬಲ್ ಸೆಂಚುರಿಗಳನ್ನು ಬಾರಿಸಿದ್ದರೆ ಅದಕ್ಕೆ ಇಂತಹ ಮನಃಸ್ಥಿತಿಯೇ ಕಾರಣ. Life is all about living on the edge ಅಂತಾರಲ್ಲಾ ಆ ಮಾತು ಕ್ರಿಕೆಟ್ ವಿಷಯದಲ್ಲಿ ಸೆಹವಾಗ್‌ಗೆ ಹೇಳಿ ಮಾಡಿಸಿದಂತಿದೆ. ಮೊದಲ ಬಾಲ್‌ಗೆ ಸಿಕ್ಸ್ ಹೊಡೆದು, ನೆಕ್ಸ್ಟ್ ಬಾಲ್‌ಗೆ ಬೌಲ್ಡ್ ಆಗಬಹುದು. ಆದರೆ ಔಟಾಗಬಹುದು ಎಂಬ ಸಣ್ಣ ಅನುಮಾನ, ಅಳುಕು ಆತನ ಮನದೊಳಕ್ಕೆ ನುಸುಳಲು ಸಾಧ್ಯವಿಲ್ಲ. ೨೦೦೭, ಸೆಹವಾಗ್ ಪಾಲಿಗೆ ದುಃಸ್ವಪ್ನವೆಂದೇ ಹೇಳಬಹುದು. ಆತನ ಫಾರ್ಮ್ ಎಷ್ಟು ಕುಸಿದು ಹೋಯಿತೆಂದರೆ ತಂಡದಲ್ಲಿ ಸ್ಥಾನ ಕೂಡ ಕಳೆದುಕೊಳ್ಳಬೇಕಾಯಿತು. ಅಂದು ಸಹಾಯಕ್ಕೆ ಬಂದವರು ಹಾಲಿ ಮುಖ್ಯ ಆಯ್ಕೆದಾರ ಹಾಗೂ ಮೊನ್ನೆ ದ್ವಿಶತಕ ಪೂರೈಸಿದಾಗ ಸಣ್ಣಮಕ್ಕಳಂತೆ ಶಿಳ್ಳೆ ಹಾಕುತ್ತಿದ್ದ ಕೃಷ್ಣಮಾಚಾರಿ ಶ್ರೀಕಾಂತ್. “ನೀನೊಬ್ಬ bloody talented player. ಕೆಟ್ಟ ಕಾಲ ಮುಗಿದ ನಂತರ ನೀನು ಡಬಲ್ ಏಕೆ ಟ್ರಿಪಲ್ ಸೆಂಚುರಿ ಕೂಡ ಹೊಡೆಯುತ್ತೀಯಾ. ಕುಟುಂಬದವರ ಜತೆ ಸಾಕಷ್ಟು ಸಮಯ ಕಳೆ. ಕಾಲ ಬಂದಾಗ ಒಳ್ಳೆಯ ಸ್ಕೋರ್ ಮಾಡುತ್ತೀಯಾ” ಎಂದು ಶ್ರೀಕಾಂತ್ ಹೇಳಿದ್ದರಂತೆ. 2008ರಲ್ಲಿ ತಂಡಕ್ಕೆ ಮರಳಿದ ಸೆಹವಾಗ್ ಶ್ರೀಲಂಕಾ ವಿರುದ್ಧ ಡಬಲ್, ದಕ್ಷಿಣ ಆಫ್ರಿಕಾದ ವಿರುದ್ಧ ಟ್ರಿಪಲ್ ಸೆಂಚರಿ ಬಾರಿಸಿದ!
ಒಮ್ಮೆ ಇಂಗ್ಲೆಂಡ್‌ನ ಖ್ಯಾತ ಬ್ಯಾಟ್ಸ್‌ಮನ್ ಪಾಲ್ ಕಾಲಿಂಗ್‌ವುಡ್, “ಬೌಲರ್ ಬಾಲ್ ಎಸೆಯಲು ಓಡಿಬರುತ್ತಿರುವಾಗ ನಿನ್ನ ತಲೆಯಲ್ಲಿ ಯಾವ ಆಯೋಚನೆ ಬರುತ್ತದೆ? ಈ ಬಾರಿ ಉತ್ತಮ ಶಾಟ್ ಹೊಡೆಯಲೇಬೇಕು ಎಂದನಿಸುತ್ತಿರುತ್ತದೆಯೇ?” ಎಂದು ಸೆಹವಾಗ್‌ನನ್ನು ಕೇಳಿದಾಗ, “ನೋ… ನೋ…. ನೋ… ವಾಚ್ ದಿ ಬಾಲ್, ಹಿಟ್ ದಿ ಬಾಲ್….!” ಎಂದಿದ್ದ ನಮ್ಮ ಸೆಹವಾಗ್!
Keep hitting Sehwag!!

ಕಾಮೆಂಟ್‌ಗಳಿಲ್ಲ: