ಅವನೊಬ್ಬ ಅರ್ಧ ವಯಸ್ಸು ಮೀರಿದ ವ್ಯಕ್ತಿ.
ಅಗಲವಾದ ಕರಿ ಕನ್ನಡಕ ಆತನ ಕಣ್ಣುಗಳಿಗೆ ಪರದೆ ಹಾಕಿದೆ. ಕೆಂಪು ಬಣ್ಣದ ಬೇಸ್‌ಬಾಲ್ ಕ್ಯಾಪ್ ಮುಖದ ಅರ್ಧ ಭಾಗವನ್ನು ಆವರಿಸಿದೆ. ಆದರೂ ಪ್ಲಾಸ್ಟಿಕ್ ಸರ್ಜರಿಯ ಗುರುತು ಹಾಗೆಯೇ ಕಾಣುತ್ತಿದೆ. ಚರ್ಮ ಸುಕ್ಕುಗಟ್ಟಿದೆ, ನೋಟ ಕಳೆಗುಂದಿದೆ, ಕೈ ಬೆರಳಿನ ಉಗುರುಗಳು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗಿವೆ. ಆತ ಪೈಜಾಮ ಹಾಕಿಕೊಂಡಿದ್ದಾನೆ. ವ್ಹೀಲ್ ಚೇರ್ ಮೇಲೆ ಕುಳಿತಿದ್ದಾನೆ. ಆ ವ್ಹೀಲ್ ಚೇರನ್ನು ಆತನ ಸಹಾಯಕ ರಸ್ತೆ ಬದಿಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾನೆ. ಅದರ ಮುಂದೆ ಮೂವರು ಮಕ್ಕಳು ಸರಸರನೆ ಸಾಗುತ್ತಿದ್ದಾರೆ. ಇಬ್ಬರು ಬಾಲಕರು, ಒಬ್ಬ ಬಾಲಕಿ. ಅಷ್ಟರಲ್ಲಿ “Slow down” ಎಂಬ ಕೀರಲು ಧ್ವನಿ ಕೇಳಿ ಬರುತ್ತದೆ. ಆದರೆ ಮಕ್ಕಳು ಕೇಳುವುದಿಲ್ಲ, ಮುಂದೆ ಸಾಗುತ್ತಾರೆ. ಹಾಗೆ ಬಂದ ಮಕ್ಕಳು ಅಂಗಡಿಯೊಂದರ ಮುಂದೆ ನಿಲ್ಲುತ್ತಾರೆ. ಕೂಡಲೇ ಬಾಗಿಲನ್ನು ತೆರೆದು ವ್ಹೀಲ್ ಚೇರ್‌ನ್ನು ಒಳಕ್ಕೆ ತಳ್ಳಿಕೊಂಡು ಹೋಗಲು ಅನುವು ಮಾಡಿಕೊಡುತ್ತಾರೆ. “Thank you” ಎಂಬ ದುರ್ಬಲ ಧ್ವನಿ ಮತ್ತೆ ಕೇಳುತ್ತದೆ. ಇನ್ನೇನು ಆ ವ್ಯಕ್ತಿ ಮಕ್ಕಳ ಜತೆ ಅಂಗಡಿಯೊಳಕ್ಕೆ ಹೋಗಬೇಕು, ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಪರಿಚಿತ ಮಹಿಳೆಯೊಬ್ಬಳು ಎದುರಿಗೆ ಬಂದು “Was that
?” ಎಂದು ರಾಗ ಎಳೆಯುತ್ತಾಳೆ. ಆದರೆ ಉತ್ತರಿಸುವಷ್ಟರಲ್ಲಿ ಅಡ್ಡಬಾಯಿ ಹಾಕಿದ ದಢೂತಿ ಅಂಗರಕ್ಷಕ “No. That was not,…” ಎನ್ನುತ್ತಾ ಬಾಲಕರ ಕೈ ಎಳೆದುಕೊಂಡು ಅಂಗಡಿಯೊಳಕ್ಕೆ ಧಾವಿಸುತ್ತಾನೆ. ಅದರೇನಂತೆ ಅಂಗಡಿಯ ಬಾಗಿಲು ತೆರೆದು ಮುಚ್ಚುವುದರೊಳಗೆ ಅಪರಿಚಿತ ಮಹಿಳೆ ಯತ್ತ ಮುಖ ಮಾಡಿ, ದೊಡ್ಡ ನಗು ಚೆಲ್ಲಿದ ಬಾಲಕನ ಬಾಯಿಂದ ಎರಡು ಪದಗಳು ಹೊರಟವು.
ಮೈಕೆಲ್ ಜಾಕ್ಸನ್!!
“ಆತನ ಅಭಿಮಾನಿಗಳು ಎಂಟು ವರ್ಷದವರಿಂದ ಎಂಬತ್ತೆಂಟು ವರ್ಷದವರವರೆಗೂ ಇದ್ದಾರೆ” ಎನ್ನುವ ಪತ್ರಕರ್ತ ರಶೋದ್ ವಲ್ಲಿಸನ್ ಅವರ ಮಾತುಗಳು ನಿಜಕ್ಕೂ ಅರ್ಥಗರ್ಭಿತ. ಒಬ್ಬ ಅಪ್ರಾಪ್ತ ಬಾಲಕ ಕೂಡ ಮೈಕೆಲ್ ಜಾಕ್ಸನ್‌ನೊಂದಿಗೆ ತನ್ನನ್ನು ರಿಲೇಟ್ ಮಾಡಿಕೊಳ್ಳ ಬಹುದು. ಆತನ ಜೀವನೋತ್ಸಾಹವೇ ಅಂಥದ್ದು. ಆದರೆ ಮೈಕೆಲ್ ಜಾಕ್ಸನ್‌ನನ್ನು ಈಗ ನೋಡಿದರೆ ಮೈಯಲ್ಲಿ ಮೂಳೆಯೇ ಇಲ್ಲದವನಂತೆ ಬ್ರೇಕ್‌ಡಾನ್ಸ್ ಮಾಡುತ್ತಿದ್ದ ವನು, ಮೂನ್‌ವಾಕ್ ಮಾಡುತ್ತಿದ್ದವನು ಇವನೇನಾ ಅಂತ ಅನುಮಾನವುಂಟಾಗದೇ ಇರುವುದಿಲ್ಲ. ನಮ್ಮ ಕಣ್ಣುಗಳನ್ನು ನಾವೇ ನಂಬದಾಗುತ್ತೇವೆ. “I Want You Back” ಎಂಬ ಆತನ ಮೊದಲ ಹಾಡು ನೆನಪಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ABC, The Love You Save, I’ll Be There ಮುಂತಾದ ಐದು ಹಾಡುಗಳನ್ನು ಹೊಂದಿದ್ದ “ಜಾಕ್ಸನ್ ೫” ಆಲ್ಬಮ್‌ನೊಂದಿಗೆ ೧೯೬೯ ಅಕ್ಟೋಬರ್‌ನಲ್ಲಿ ಪಾಪ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ೧೧ ವರ್ಷದ ಜಾಕ್ಸನ್‌ಗೇಕೆ ಈ ದುರ್ಗತಿ ಬಂತು ಎಂದು ಮನಸ್ಸಿಗೆ ನೋವಾಗುತ್ತದೆ. ನಮಗಿಂತ ಮೊದಲಿನ ತಲೆಮಾರಿನವರು ಎಲ್ವಿಸ್ ಪ್ರೆಸ್ಲಿ, ಬಾಬ್ ಡೈಲಾನ್, ಜಾನ್ ವಿನ್‌ಸ್ಟನ್ ಲೆನಾನ್, ಸ್ಟೀವ್ ವಂಡರ್, ಪಾಲ್ ಮೆಕಾರ್ಟ್ನಿ, ಫಿಲ್ ಕಾಲಿನ್ಸ್ ಮುಂತಾದವರನ್ನು ಇಷ್ಟಪಟ್ಟಿರಬಹುದು. ಆದರೆ ಚಾರ್ಲಿ ಚಾಪ್ಲಿನ್ ನಂತರ ಎಷ್ಟೇ ಒಳ್ಳೆಯ ಹಾಸ್ಯ ನಟರು ಬಂದಿದ್ದರೂ ಹೇಗೆ ಯಾರೂ ಚಾಪ್ಲಿನ್‌ನಷ್ಟು ಇಷ್ಟವಾಗುವುದಿಲ್ಲವೋ ಹಾಗೆಯೇ ಮೈಕೆಲ್ ಜಾಕ್ಸನ್ ಯಾವತ್ತೂ ನಮಗೆ ಸ್ಪೆಷಲ್. ಇವತ್ತು ಯಾವುದಾದರೂ ಹುಡುಗ ಚೆನ್ನಾಗಿ ಡಾನ್ಸ್ ಮಾಡಿದರೆ ಹೃತಿಕ್ ರೋಶನ್, ಪ್ರಭುದೇವಾ ನೆನಪಾಗಬಹುದು. ಆದರೆ ಹತ್ತು ವರ್ಷಗಳ ಹಿಂದಿನವರೆಗೂ ಜಾಕ್ಸನ್ ಎಂದರೆ ಬ್ರೇಕ್ ಡಾನ್ಸ್, ಮೂನ್‌ವಾಕ್ ನೆನಪಾಗುತ್ತಿತ್ತು. “ಏನೋ ಜಾಕ್ಸನ್ ಥರಾ ಕುಣಿಯುತ್ತೀಯಾ?” ಎನ್ನುತ್ತಿದ್ದರು ಜನ. ಅಂತಹ ಮೈಕೆಲ್ ಜಾಕ್ಸನ್ ಎಂದೋ ಮಾಡಿದ ಡಾನ್ಸ್‌ನ ಕಳಪೆ ಕಾಪಿಯೇ “ಕ್ರೇಝಿ-೪”ನಲ್ಲಿ ಹೃತಿಕ್ ರೋಶನ್ ಮಾಡಿರುವುದು!! ಹಾಗಂತ ಮೈಕೆಲ್ ಜಾಕ್ಸನ್ ಬರೀ ಒಬ್ಬ ಉತ್ತಮ ಡಾನ್ಸರ್ ಆಗಿರಲಿಲ್ಲ. ಉತ್ತಮ ಸಾಹಿತ್ಯ ರಚನೆಯ ಮೂಲಕ ಪಾಪ್ ಸಂಗೀತವೆಂದರೆ ಬರೀ ಸದ್ದು ಗದ್ದಲವಲ್ಲ ಎಂಬುದನ್ನು ಸಾಬೀತು ಮಾಡಿದವರಲ್ಲಿ ಅವನೂ ಒಬ್ಬ.
She’s Out Of My Life
She’s Out Of My Life
And I Don’t Know Whether To Laugh Or Cry
I Don’t Know Whether To Live Or Die
And It Cuts Like A Knife
She’s Out Of My Life
ಎಂಬ ಆತನ ಹಾಡನ್ನು ಕೇಳಿ ಅದೆಷ್ಟು ನೊಂದ ಪ್ರೇಮಿ ಗಳು ಕಣ್ಣೀರಿಟ್ಟಿಲ್ಲ ಹೇಳಿ?
I Don’t Need No Dreams When I’m By Your Side
Every Moment Takes Me To Paradise
Darlin’, Let Me Hold You
Warm You In My Arms And Melt Your Fears Away
Show You All The Magic That A Perfect Love Can
Make
I Need You Night And Day
ಅವನ ಹಾಡುಗಳಲ್ಲಿ ನೋವೂ ಇದೆ, ನಲಿವೂ ಇದೆ, ಹತಾಶೆಯೂ ವ್ಯಕ್ತವಾಗುತ್ತದೆ, ಊಟಟಠಿ SZmmಜ್ಞಿಜ ಕೂಡ ಆಗಿವೆ. ನಮ್ಮಂತೆ ಹಾಡು ಬರೆಯುವುದು ಯಾರೋ, ಹಾಡುವುದು ಇನ್ಯಾರೋ, ತುಟಿ ಪಿಟಿಪಿಟಿ ಮಾಡುವುದು ಮತ್ಯಾರೋ ಅಲ್ಲ. ಈ ಎಲ್ಲವೂ ಅವನು ಸ್ವತಃ ಬರೆದು, ಹಾಡಿ, ಕುಣಿದ ಹಾಡುಗಳೇ. ೧೯೮೨, ಡಿಸೆಂಬರ್ ೧ ರಂದು ಬಿಡುಗಡೆಯಾದ ಆತನ ‘ಥ್ರಿಲ್ಲರ್” ಆಲ್ಬಮ್ ಸತತ ೩೭ ವಾರಗಳ ಕಾಲ ನಂಬರ್-೧ ಸ್ಥಾನದಲ್ಲಿತ್ತು. ೧೧ ಗ್ರಾಮಿ ಪ್ರಶಸ್ತಿಗಳನ್ನು ಬಾಚಿಕೊಂಡಿತು!! ೧೦ ಕೋಟಿ ಕಾಪಿಗಳು ಮಾರಾಟವಾದವು. ಇಂದಿಗೂ ಯಾರಿಂದಲೂ ಆ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಥ್ರಿಲ್ಲರ್‌ನಲ್ಲಿದ್ದ “Beat It” ಹಾಡಿನ ಬಗ್ಗೆ ಬರೆಯುತ್ತಾ “ಆ ಹಾಡು ಸಂಗೀತವನ್ನು ಶಾಶ್ವತವಾಗಿ ಬದಲಾಯಿಸಿ ಬಿಟ್ಟಿತು” ಎಂದಿತು ‘ರೋಲಿಂಗ್ ಸ್ಟೋನ್’ ಮ್ಯಾಗಝಿನ್. ಮತ್ತೊಂದು ಹಾಡು “Billie Jean” ೭ ವಾರಗಳ ಕಾಲ ನಂಬರ್-೧ ಪಟ್ಟ ಆಕ್ರಮಿಸಿತು. “ಬ್ಯಾಡ್” ಆಲ್ಬಮ್‌ಗಿಂತ ಮೊದಲು ಬಿಡುಗಡೆಯಾದ ಸೀಡ್ಹಾ ಗ್ಯಾರೆಟ್ ಜತೆಗಿನ “I Just Can’t Stop Loving You” ಯುಗಳ ಗೀತೆ ಜನರನ್ನು ವಾಸ್ತವದಲ್ಲಿ ಹುಚ್ಚೆಬ್ಬಿಸಿತು. ೧೯೯೩ರಲ್ಲಿ ಅಮೆರಿಕದ ರಾಷ್ಟ್ರೀಯ ಫುಟ್ಬಾಲ್ ಲೀಗ್‌ನ ಫೈನಲ್ ಪಂದ್ಯದ ಮಧ್ಯಂತರ ಅವಧಿಯಲ್ಲಿ ಆಯೋಜನೆಯಾಗಿದ್ದ ಮೈಕೆಲ್ ಜಾಕ್ಸನ್ ಶೋವನ್ನು ಅಮೆರಿಕದ ಇತಿಹಾಸದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸುವುದರೊಂದಿಗೆ ಯಾರೂ ಮುರಿಯಲಾಗದ ದಾಖಲೆ ಸೃಷ್ಟಿಯಾಯಿತು.
Zoom to Zenith, Fall to Nadir!
ಅನ್ನುವ ಹಾಗೆ, ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಮೈಕೆಲ್ ಜಾಕ್ಸನ್ ವಿವಾದಗಳ ಸುಳಿಗೆ ಸಿಲುಕಿ ಕೊಳಕ ನೆನಿಸಿಕೊಂಡ. ೧೯೯೩, ಸೆಪ್ಟೆಂಬರ್ ೧೫ರಂದು ೧೩ ವರ್ಷದ ಬಾಲಕನೊಬ್ಬ ಜಾಕ್ಸನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ. ಅದು ಜಾಕ್ಸನ್‌ನನ್ನು ಎಷ್ಟು ಪೇಚಿಗೀಡು ಮಾಡಿತೆಂದರೆ ೨೨ ದಶಲಕ್ಷ ಡಾಲರ್ ಪರಿಹಾರ ಕೊಟ್ಟು ಕೋರ್ಟ್‌ನ ಹೊರಗೆ ವಿವಾದಕ್ಕೆ ತೆರೆ ಎಳೆಯಬೇಕಾಗಿ ಬಂತು. ಆದರೂ ವಿವಾದಗಳು ಬಿಡಲಿಲ್ಲ. ಇವತ್ತು ಜಾಕ್ಸನ್‌ನ ಹೆಸರೆತ್ತಿದರೆ ಬಹುಶಃ ಈಗಿನ ತಲೆಮಾರಿಗೆ ಆತನ ವಿಕೃತ ಮುಖವೇ ನೆನಪಾಗುತ್ತದೆ. ೨೦೦೫ರವರೆಗೂ ನಡೆದ ಕೋರ್ಟ್ ವಿಚಾರಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳೇ ಕಣ್ಣಮುಂದೆ ಬರುತ್ತವೆ.
ಇಂತಹ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾದರೂ ಏನು?
ಹಗಲು ಉಕ್ಕಿನ ಕಾರ್ಖಾನೆಯಲ್ಲಿ ದುಡಿದು ರಾತ್ರಿ ಸಂಗೀತ ನುಡಿಸುತ್ತಿದ್ದ ಜೋ ಜಾಕ್ಸನ್ ಒಬ್ಬ ಫ್ಲಾಪ್ ‘ಆರ್ ಆಂಡ್ ಬಿ’(Rhythm and Blues) ಪರ್ಫಾರ್ಮರ್. ಎಷ್ಟೋ ಅಪ್ಪ-ಅಮ್ಮಂದಿರು ತಮ್ಮಿಂದಾಗದ್ದನ್ನು ಮಕ್ಕಳ ಮೂಲಕ ಸಾಧಿಸಲು ಹಂಬಲಿಸುತ್ತಾರೆ. ಹಾಗೆಯೇ ಜೋ ಜಾಕ್ಸನ್ ಮಕ್ಕಳ ಮೂಲಕ ತನ್ನ ಆಸೆಯನ್ನು ಈಡೇರಿಸಿ ಕೊಳ್ಳಬೇಕೆಂದು ಹಂಬಲಿಸತೊಡಗಿದ. ಇಂತಹ ಹಂಬಲ ಪುನಃ ಹತಾಶೆಯಾಗಿ ಪರಿಣಮಿಸಿ ಕೆಲವು ಸಲ ಮಕ್ಕಳ ಜತೆ ವಿಚಿತ್ರವಾಗಿ ವರ್ತಿಸುತ್ತಿದ್ದ. ಒಮ್ಮೆ ಮೈಕೆಲ್ ಜಾಕ್ಸನ್ ತನ್ನ ಕೊಠಡಿಯಲ್ಲಿ ಮಲಗಿದ್ದಾಗ ಭೂತದ ವೇಷ ಹಾಕಿಕೊಂಡು ಕಿಟಕಿಯ ಮೂಲಕ ಆಗಮಿಸಿದ ಜೋ ಜಾಕ್ಸನ್ ಮಗನನ್ನು ಭಯಭೀತಗೊಳಿಸಿದ್ದ. ರಾತ್ರಿ ವೇಳೆ ಕಿಟಕಿ ಮುಚ್ಚಿ ಮಲಗ ಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವ ಸಲುವಾಗಿ ಹಾಗೆ ಮಾಡಿದೆ ಎಂದು ಸಮಜಾಯಿಷಿ ನೀಡಿದ. ಆದರೆ ಆ ಘಟನೆ ಮೈಕೆಲ್ ಜಾಕ್ಸನ್‌ನನ್ನು ಎಷ್ಟು ಅಧೀರನನ್ನಾಗಿ ಮಾಡಿತು ಎಂದರೆ ಎಷ್ಟೋ ವರ್ಷಗಳವರೆಗೂ ಬೆಡ್‌ರೂಮ್‌ನಿಂದ ತನ್ನನ್ನು ಯಾರೋ ಅಪಹರಿಸುತ್ತಿರುವಂತೆ ದುಃಸ್ವಪ್ನಗಳು ಬೀಳಲಾರಂಭಿಸಿದವು. ಆತನ ಥ್ರಿಲ್ಲರ್ ಆಲ್ಬಮ್‌ನಲ್ಲಿ ಇಂತಹ ಭಯದ ಛಾಯೆಗಳಿವೆ, ಹಾಡುಗಳಲ್ಲಿ ಬಿಳಿಯರ ದೌರ್ಜನ್ಯದ ವಿರುದ್ಧದ ಧ್ವನಿಯಿದೆ. ಅಷ್ಟೇ ಅಲ್ಲ, ಪ್ಲಾಸ್ಟಿಕ್ ಸರ್ಜರಿಯ ಮೂಲಕ ತನ್ನ ತೊಗಲಿನ ಬಣ್ಣವನ್ನೇ ಬದಲಾಯಿಸಿಕೊಳ್ಳಲು ಹೊರಟ!
I Said If
You’re Thinkin’ Of
Being My Brother
It Don’t Matter If You’re
Black Or White
ಅಥವಾ
Beat me, hate me
You can never break me
Will me, thrill me
You can never kill me
Jew me, sue me
Everybody do me
Kick me, kick me
Don’t you black or white me
All I wanna say is that
They don’t really care about us
ಈ ಗೀತೆಗಳಲ್ಲಿ ಆತನ ನೋವು, ಹತಾಶೆಯನ್ನು ಕಾಣ ಬಹುದು. ಇವತ್ತು ಕಾಣುವ ಇಂಟರ್‌ನೆಟ್, ಸೆಲ್‌ಫೋನ್, ಐ ಪಾಡ್‌ಗಳಿಲ್ಲದ ಕಾಲದಲ್ಲೇ ಅವನ ಹಾಡುಗಳು ಮಾಡಿದ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಎಂದರೆ ಮೈಕೆಲ್ ಜಾಕ್ಸನ್‌ನ ಹಾಡುಗಳ ಜನಪ್ರಿಯತೆ ಹೇಗಿದ್ದಿರಬಹುದು ಊಹಿಸಿಕೊಳ್ಳಿ. ದುರದೃಷ್ಟವೆಂದರೆ ಜನಪ್ರಿಯತೆ ಹೆಚ್ಚಾದಂತೆ ಆತನ ಹುಚ್ಚುತನಗಳೂ ಹೆಚ್ಚಾದವು. ೧೯೮೮ರಲ್ಲಿ ಬೃಹತ್ ತೋಟ ವನ್ನು ಖರೀದಿ ಮಾಡಿ, “ನೆವರ್ ಲ್ಯಾಂಡ್” ಹೆಸರು ಕೊಟ್ಟ. ಸ್ನೇಹಿತರು, ಕುಟುಂಬದಿಂದ ದೂರವಾದ. ಅಂತಹ ಏಕಾಂತ ಆತನಿಗೇ ಮುಳುವಾಯಿತು. ನಾಳೆ ಎಂಬುದೇ ಇಲ್ಲವೇನೋ ಎಂಬಂತೆ ಹಣ ವ್ಯಯ ಮಾಡತೊಡಗಿದ. ‘ನೆವರ್ ಲ್ಯಾಂಡ್’ನೊಳಕ್ಕೆ ಪ್ರಾಣಿಗಳು ಹಾಗೂ ಮಕ್ಕಳಿಗಷ್ಟೇ ಪ್ರವೇಶ ನೀಡಿ “False Reality”ಯಲ್ಲಿ ಬದುಕ ತೊಡಗಿದ ಆತ, ವಿವಾದಗಳನ್ನೂ ಮೈಮೇಲೆಳೆದುಕೊಂಡ. ೧೯೯೩ರಲ್ಲಿ ಮೊಟ್ಟಮೊದಲ ಬಾರಿಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದರೂ ೨೦೦೩ರಲ್ಲಿ ಮತ್ತೆ ಭುಗಿಲೆದ್ದ ಇದೇ ಆರೋಪವಂತೂ ಆತನ ಭವಿಷ್ಯವನ್ನು ಶಾಶ್ವತವಾಗಿ ಹಾಳುಗೆಡವುವ ಅಪಾಯ ತಂದೊಡ್ಡಿತು. ದೀರ್ಘ ಕಾಲದವರೆಗೂ ನಡೆದ ನ್ಯಾಯಾಂಗ ವಿಚಾರಣೆಯಿಂದಾಗಿ ಜಾಕ್ಸನ್ ತತ್ತರಿಸಿ ಹೋದ. ಆತ ಎಷ್ಟು ಕುಂದಿಹೋದನೆಂದರೆ ಕೋರ್ಟ್ ಆತನನ್ನು ದೋಷಮುಕ್ತನೆಂದು ಘೋಷಿಸಿದಾಗ ನಿಟ್ಟುಸಿರು ಬಿಡುವ ತಾಕತ್ತೂ ಆತನಲ್ಲಿರಲಿಲ್ಲ, ಮುಖ ನಿರ್ಭಾವುಕವಾಗಿತ್ತು. ಎಂದೆಂದೂ ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದ. ಇಂದು ಮೈಕೆಲ್ ಜಾಕ್ಸನ್ ಎಂದರೆ ಒಬ್ಬ ಹುಚ್ಚ ಅಂತ ಅನ್ನಿಸಬಹುದು. ಆದರೆ ಅವನ ಹುಚ್ಚುತನದ ಹಿಂದೆ ಕರಾಳ ಬಾಲ್ಯದ ಕರಿಛಾಯೆ ಇದೆ. ಕರಿಯರ ಆರ್ದ್ರ ನಾದವಿದೆ.
We are the world, we are the children
We are the ones who make a brighter day
So lets start giving
Theres a choice we’re making
We’re saving our own lives
its true we’ll make a better day
Just you and me
ಅಥವಾ
Heal The World
Make It A Better Place
For You And For Me
And The Entire Human Race
There Are People Dying
If You Care Enough
For The Living
Make A Better Place
For You And For Me
ಇಂತಹ ಹಾಡುಗಳನ್ನು ಕೇಳಿ, ಅವನ ಮನದಾಳದ ತುಡಿತ ಅರ್ಥವಾಗುತ್ತದೆ. ನಿಮ್ಮ ಕಣ್ಣುಗಳೂ ತುಂಬಿಕೊಳ್ಳು ತ್ತವೆ. ಹಾಗೆ ಮುದ ಕೊಟ್ಟ ಮೈಕೆಲ್ ಜಾಕ್ಸನ್ ನಿನ್ನೆ (ಆಗಸ್ಟ್ ೨೯) ಐವತ್ತಕ್ಕೆ ಕಾಲಿಟ್ಟಿದ್ದಾನೆ. ಆದರೆ ನಮ್ಮ ಹೃದಯದ ಬಡಿತ ಹೆಚ್ಚಿಸುತ್ತಿದ್ದ ಆತನ ಕಾಲುಗಳೇ ಸೋತು ಹೋಗಿವೆ. ಮಾದಕ ವಸ್ತು ವ್ಯಸನ, ಪ್ಲಾಸ್ಟಿಕ್ ಸರ್ಜರಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅದರಿಂದ ಎದುರಾದ ಅವಮಾನಗಳು ಅವನನ್ನು ಈ ಸ್ಥಿತಿಗೆ ತಂದಿವೆ. ಹಾಗಾಗಿ ಆತನ ಕೊಳಕುತನವನ್ನು ಬೈಯ್ಯಲು ಖಂಡಿತ ಬೇಕಾದಷ್ಟು ಕಾರಣಗಳು ಸಿಗುತ್ತವೆ. ಆದರೆ ಮನಸ್ಸು ಮಾತ್ರ ಒಪ್ಪುವುದಿಲ್ಲ. ಏಕೆಂದರೆ ಸಮ ದಾರಿಯಲ್ಲಿ ನಡೆಯುವವನು ಉರುಳಿ ಬೀಳಲು ಸಾಧ್ಯವಿಲ್ಲ. ಎತ್ತರಕ್ಕೇರಿದ ಮೇಲೆಯೇ ಅದು ಸಾಧ್ಯ. ಇವತ್ತು ಮೈಕೆಲ್ ಜಾಕ್ಸನ್ ನಮ್ಮ ಕಣ್ಣಿಗೆ Fallen Hero ಥರಾ ಕಾಣುತ್ತಿದ್ದರೆ ಅದಕ್ಕೆ ಆತ ಏರಿದ Heights, ಅದು ತಂದ ಒಂಟಿತನ, ಬಳುವಳಿಯಾಗಿ ಬಂದ Insecurity, ಭಯ, ಆತಂಕಗಳೇ ಕಾರಣ. ಯಾವುದೇ ಸಾಧಕನನ್ನು ಇಷ್ಟಪಡಲು ಅಥವಾ ದ್ವೇಷಿಸಲು ನಾನಾ ಕಾರಣಗಳಿರುತ್ತವೆ. ಅದು ಮರಡೋನಾ ಇರ ಬಹುದು, ಜಾಕ್ಸನ್ ಆಗಿರಬಹುದು. ಅವರನ್ನು ಇಷ್ಟಪಡಲು ಅಥವಾ ತಿರಸ್ಕರಿಸಲು ಎಲ್ಲರಿಗೂ ಕಾರಣ ಇರುತ್ತದೆ. ಆದರೆ ಅವರುಗಳು ಏರಿದ ಎತ್ತರವನ್ನು, ಗಳಿಸಿದ ಖ್ಯಾತಿ, ಕೀರ್ತಿಯನ್ನು, ನೋಡುಗರಿಗೆ ನೀಡಿದ ಉದ್ವೇಗ, ಆನಂದ ವನ್ನು ನೀಡಲು Lesser Mortalsಗಳಿಂದ ಸಾಧ್ಯವಿಲ್ಲ. ಇದೊಂದೇ ಕಾರಣಕ್ಕಾಗಿ ಇವರು ನಮ್ಮ ಹೃದಯಕ್ಕೆ ಹತ್ತಿರ ವಾಗುತ್ತಾರೆ. ಜಾಕ್ಸನ್‌ನ ಕರಾಳ ಮುಖ ಕಂಡು ಜಗತ್ತು ಅಹಸ್ಯಪಡಬಹುದು. ಆದರೆ ತ್ರಾಣ ಕಳೆದುಕೊಂಡಿರುವ ಆ ಗಂಟಲು ಮತ್ತು ಕೈ ಕಾಲು ಮತ್ತೆ ಅರಳಿ ನಿಂತರೆ ಕೊಳೆ ಕಳೆಯುವುದರಲ್ಲಿ ಯಾವ ಸಂದೇಹವೂ ಇಲ್ಲ. ತೀರಾ ಕೆಲ ವರಿಗಷ್ಟೇ ಇದು ಸಾಧ್ಯ. ಐವತ್ತಕ್ಕೆ ಕಾಲಿಟ್ಟಿರುವ ಜಾಕ್ಸನ್‌ನ “ಹಿಸ್ಟರಿ” ಆಲ್ಬಮ್‌ನಲ್ಲಿ “ಚೈಲ್ಡ್‌ಹುಡ್” ಎಂಬ ಹಾಡು ಬರುತ್ತದೆ. ಅದರ ಒಂದು ಸಾಲು ಈ ರೀತಿ ಇದೆ- “Before you judge me, try hard to love me.”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ