ಪುಟಗಳು

ಮಂಗಳವಾರ, ಆಗಸ್ಟ್ 10, 2010

ಪೀಟರ್‌ಸನ್‌

ಮೈಕೆಲ್ ವಾನ್ ರಾಜೀನಾಮೆಯ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ ಸನ್ ಅವರನ್ನು ಇಂಗ್ಲೆಂಡ್‌ನ ನೂತನ ಕ್ಯಾಪ್ಟನ್ ಎಂದು ಘೋಷಣೆ ಮಾಡಲಾಗಿದೆ. ಮೂಲತಃ ದಕ್ಷಿಣ ಆಫ್ರಿಕಾದವನಾದ ಪೀಟರ್‌ಸನ್ ೨೦೦೪ರಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ನಾನು ಬರೆದಿದ್ದ ಲೇಖನ ಇದಾಗಿದೆ.

ಅವರೇನು ರತ್ನಗಂಬಳಿ ಹಾಸಿ ಕರೆದಿರಲಿಲ್ಲ!
ಅಂತಹ ಅಗತ್ಯವೂ ಇರಲಿಲ್ಲ. ಅಷ್ಟಕ್ಕೂ ಅವನೇನು ಸಚಿನ್ ತೆಂಡೂಲ್ಕರ್‌ನಂತೆ ಮೀಸೆ ಮೂಡುವ ಮೊದಲೇ ಛಾಪು ಒತ್ತಿದವನಲ್ಲ. ಆದರೆ ಪ್ರತಿಭೆಯ ಎಲ್ಲ ಕುರುಹುಗಳೂ ಇದ್ದವು. ಆದರೂ ಸೂಕ್ತ ವೇದಿಕೆಯ ಕೊರತೆಯಿತ್ತು. ಕ್ರಾಝುಲು ನಟಾಲ್(KwaZulu-Natal) ಪರ ಆಡುತ್ತಿದ್ದರೂ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುವ ಅವಕಾಶದಿಂದಲೇ ವಂಚಿತನಾಗಬೇಕಿತ್ತು. “Positive discrimination quota’ ವ್ಯವಸ್ಥೆ ಹಾಗಿತ್ತು. ವರ್ಣಭೇದ ನೀತಿಯ ಸುಳಿಗೆ ಸಿಲುಕಿ ತುಳಿತಕ್ಕೊಳಗಾಗಿದ್ದ ಕಪ್ಪುವರ್ಣೀಯರನ್ನು ಮೇಲೆತ್ತುವ ಸಲುವಾಗಿ ಕ್ರೀಡಾ ಕ್ಷೇತ್ರದಲ್ಲೂ ಮೀಸಲು ಅಥವಾ ಕೋಟಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕಪ್ಪುವರ್ಣೀಯ ಯುವ ಕ್ರೀಡಾ ಪಟುಗಳಿಗೆ ಕೋಟಾ ವ್ಯವಸ್ಥೆಯಡಿ ದೇಶವನ್ನು ಪ್ರತಿನಿಧಿಸುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿತ್ತು. ಶ್ವೇತವರ್ಣೀಯರಿಗೆ ಪ್ರತಿಭೆ ಇದ್ದರೂ ಅವಕಾಶ ದೊರೆಯುತ್ತದೆಂದು ಹೇಳುವಂತಿರಲಿಲ್ಲ. ಹಾಗಾಗಿ ಹನ್ನೊಂದನೇ ವರ್ಷಕ್ಕೆ ಕ್ರಿಕೆಟ್ ಆಡಲು ಆರಂಭಿಸಿದ್ದ ‘ಕೆವಿನ್ ಪೀಟರ್ ಪೀಟರ್‌ಸನ್’ ಚಿಂತಿತನಾಗಿದ್ದ. ಭ್ರಮನಿರಸನಗೊಂಡಿದ್ದ.
ಅದೇ ಸಂದರ್ಭದಲ್ಲಿ, “ವಿಹಾರವೆಂಬಂತೆ ಇಲ್ಲಿಗೆ ಬಂದು, ನಾಲ್ಕಾರು ತಿಂಗಳು ಕ್ರಿಕೆಟ್ ಆಡಿ, ತಿಂದುಂಡು ವಾಪಸ್ ಹೋಗಲು ಬರುವುದು ನನಗಿಷ್ಟವಿಲ್ಲ. ನೀನು ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಬೇಕು. ನಾಲ್ಕು ವರ್ಷ ಇಲ್ಲೇ ಆಡಬೇಕು. ಆಗ ಇಂಗ್ಲೆಂಡನ್ನು ಪ್ರತಿನಿಧಿಸುವ ಅರ್ಹತೆ ದೊರೆಯುತ್ತದೆ” ಎಂಬ ಸರಳ ಸಂದೇಶ ಬಂದಿತ್ತು. ಅದು ಕೌಂಟಿ ಕ್ರಿಕೆಟ್ ಆಡುವ contract. ನಾಟಿಂಗ್‌ಹ್ಯಾಮ್‌ಶೈರ್‌ನ ತರಬೇತುದಾರ ಕ್ಲೈವ್ ರೈಸ್ ಇಂತಹ ಸಂದೇಶ ಕಳುಹಿಸಿದ್ದರು.
ಅವಕಾಶವನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ. ಪೀಟರ್‌ಸನ್ ಇಂಗ್ಲೆಂಡ್‌ನತ್ತ ಮುಖ ಮಾಡಿದ. ೨೦೦೧ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಕೌಂಟಿ ಕ್ರಿಕೆಟ್‌ಗೆ ಕಾಲಿಟ್ಟ. ಮೊದಲ ಸೀಸನ್ ನಲ್ಲೇ ಐದು ಸೆಂಚುರಿ ಹಾಗೂ ಒಂದೆರಡು ಡಬಲ್ ಸೆಂಚುರಿ ಬಾರಿಸಿದ. ಆದರೆ ವಿವಾದ ಆರಂಭವಾಯಿತು. ನಾಟಿಂಗ್‌ಹ್ಯಾಮ್‌ಶೈರ್ ನಾಯಕ ಜೇಸನ್ ಗಾಲಿಯನ್ ಜತೆ ತಿಕ್ಕಾಟ. ಒಮ್ಮೆಯಂತೂ ಪೀಟರ್‌ಸನ್‌ನ ಸ್ಪೋರ್ಟ್ಸ್ ಕಿಟ್ಟನ್ನೇ ಹೊರಗೆಸೆದ ಗಾಲಿಯನ್, ಬ್ಯಾಟನ್ನೂ ಮುರಿದು ಹಾಕಿದ. ಸಂಬಂಧ ಸರಿಪಡಿಸಲಾರದಷ್ಟು ಹಳಸಿತು. ಆದರೂ ಒಪ್ಪಂದದಂತೆ ಮೂರು ವರ್ಷ ನಾಟಿಂಗ್‌ಹ್ಯಾಮ್‌ಶೈರ್ ಪರವೇ ಆಡಬೇಕಿತ್ತು. ಸಹ ಆಟಗಾರರೊಂದಿಗೆ ಮುಖಕೆಡಿಸಿಕೊಂಡರೂ ಆತನ ಬ್ಯಾಟಿಂಗ್ ಬಗ್ಗೆ ಯಾರೂ ಚಕಾರವೆತ್ತುವಂತಿರಲಿಲ್ಲ. ಹೀಗೆ ಮೂರು ವರ್ಷ ಬ್ಯಾಟಿನಿಂದಲೇ ಉತ್ತರ ನೀಡಿದ ಪೀಟರ್‌ಸನ್, ೨೦೦೪ರಲ್ಲಿ ಹ್ಯಾಂಪ್‌ಶೈರ್ ನೊಂದಿಗೆ ಒಪ್ಪಂದ ಮಾಡಿಕೊಂಡ. ಆ ಹ್ಯಾಂಪ್‌ಶೈರ್ ತಂಡದ ನಾಯಕ ಮತ್ತಾರೂ ಅಲ್ಲ, ವಿಶ್ರವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್. ಆಸ್ಟ್ರೇಲಿಯಾದ ವಾರ್ನ್ ಮತ್ತು ದಕ್ಷಿಣ ಆಫ್ರಿಕಾದ ಪೀಟರ್‌ಸನ್ ಇಬ್ಬರ ಮಧ್ಯೆ ಅದಾವುದೋ ನಂಟು ಆರಂಭವಾಯಿತು. ನಾಟಿಂಗ್‌ಹ್ಯಾಮ್ ನಾಯಕ ಗಾಲಿಯನ್ ವೈಷಮ್ಯ ಸಾಧಿಸಿದರೆ, ಶೇನ್ ವಾರ್ನ್ ಯುವ ಆಟಗಾರ ಪೀಟರ್ ಸನ್‌ನ ಬೆಂಗಾವಲಿಗೆ ನಿಂತ. ಅಗತ್ಯವಿದ್ದ ಎಲ್ಲ ಪೋ ನೀಡಿದ.
ನಾಲ್ಕು ವರ್ಷ ಕಳೆದೇ ಹೋಯಿತು.
೨೦೦೪ರ ಸೆಪ್ಟೆಂಬರ್‌ನಲ್ಲಿ ಜಿಂಬಾಬ್ರೆ ವಿರುದ್ಧ ನಡೆಯಲಿದ್ದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡದ ಆಯ್ಕೆ ನಡೆದಿತ್ತು. ಕೌಂಟಿ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರೂ, ಟನ್‌ಗಟ್ಟಲೆ ರನ್ ಹೊಡೆದಿದ್ದರೂ, ಪ್ರತಿಭೆಯನ್ನು ಸಾಬೀತುಪಡಿಸಿದ್ದರೂ ಸಾಧನೆಯೊಂದರಿಂದಲೇ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಪೀಟರ್‌ಸನ್ ದಕ್ಷಿಣ ಆಫ್ರಿಕಾದವನಾಗಿದ್ದ. ಆದರೇನಂತೆ, ಪೀಟರ್‌ಸನ್ ಅಮ್ಮ ಇಂಗ್ಲೆಂಡ್‌ನಲ್ಲಿ ಜನಿಸಿದವಳಾಗಿದ್ದಳು. ಆ ಕಾರಣಕ್ಕಾಗಿ ಇಂಗ್ಲೆಂಡನ್ನು ಪ್ರತಿನಿಧಿಸುವ ಅರ್ಹತೆ ದೊರೆಯಿತು. ಜಿಂಬಾಬ್ರೆಯಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪೀಟರ್‌ಸನ್, ೧೦೪ ಸರಾಸರಿಯೊಂದಿಗೆ ಸ್ಕೋರ್ ಮಾಡಿದ. ಆ ಸಾಧನೆಯೇ ೨೦೦೫ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗಲಿದ್ದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಟ್ಟಿತು. ಆದರೆ ಅಣಕವೆಂದರೆ, ಯಾವ ದೇಶವನ್ನು ಪ್ರತಿನಿಧಿಸಬೇಕು, ಯಾವ ದೇಶದ ಜೆರ್ಸಿ ಧರಿಸಬೇಕು, ಯಾವ ದೇಶದ ಕೀರ್ತಿಪತಾಕೆಯನ್ನು ಹಾರಿಸಬೇಕು ಎಂದು ಕನಸುಕಂಡಿದ್ದನೋ ಅದೇ ದೇಶದ ವಿರುದ್ಧ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಮ್ಮ ವೀರೇಂದ್ರ ಸೆಹವಾಗ್ ಚೊಚ್ಚಲ ಟೆಸ್ಟ್ ಶತಕ ಗಳಿಸಿದ್ದ ಬ್ಲೋಮ್‌ಫಾಂಟೇನ್‌ನಲ್ಲಿ ೨೦೦೫, ಫೆಬ್ರವರಿ ೨ರಂದು ಎರಡನೇ ಏಕದಿನ ಪಂದ್ಯವಾಡಲು ಪೀಟರ್‌ಸನ್ ಮೈದಾನಕ್ಕಿಳಿದ. ಮುಂದಿನದ್ದು ಇತಿಹಾಸ. ಮೊದಲ ಶತಕ ದಾಖಲಿಸಿದ. ಸೆಂಚುರಿ ಬಾರಿಸಿದ ಖುಷಿಯಲ್ಲಿ ಆಶ್ರಯ, ಅವಕಾಶ ನೀಡಿದ ಇಂಗ್ಲೆಂಡನ್ನು ಮರೆಯಲಿಲ್ಲ. ಹೆಲ್ಮೆಟ್‌ನಲ್ಲಿದ್ದ ಇಂಗ್ಲೆಂಡ್ ಚಿಹ್ನೆಗೆ ಮುತ್ತಿಕ್ಕಿ ತನ್ನ ನಿಷ್ಠೆಯನ್ನು ತೋರಿಸಿದ. ಮೂರು ಸಿಂಹಗಳು ಹಾಗೂ ತನ್ನ ಜೆರ್ಸಿಯ ಮೇಲಿದ್ದ ಇಂಗ್ಲೆಂಡ್ ತಂಡದ ನಂಬರನ್ನು ತೋಳಿನ ಮೇಲೆ ಹಚ್ಚೆ(tattoo) ಹಾಕಿಸಿಕೊಂಡ.
ಆಗಲೇ ದಕ್ಷಿಣ ಆಫ್ರಿಕಾ ರೊಚ್ಚಿಗೆದ್ದಿದ್ದು.
ಬ್ಲೋಮ್‌ಫಾಂಟೇನ್‌ನಲ್ಲಿ ಚೊಚ್ಚಲ ಸೆಂಚುರಿ ಹೊಡೆದಾಗ ಎದ್ದುನಿಂತು ಚಪ್ಪಾಳೆ ತಟ್ಟಿದ್ದ ಜನ, ವಾಂಡರರ್‍ಸ್ ಹಾಗೂ ಜೋಹಾನ್ನೆಸ್‌ಬರ್ಗ್‌ನಲ್ಲಿ ಪೀಟರ್‌ಸನ್ ಮೈದಾನಕ್ಕಿಳಿದಾಗ “ದೇಶದ್ರೋಹಿ..ದೇಶದ್ರೋಹಿ…ದೇಶದ್ರೋಹಿ” ಎಂದು ಹಳಿಯಲು ಆರಂಭಿಸಿದರು. ಆದರೆ ಇದಾವುದೂ ಪೀಟರ್‌ಸನ್‌ಗೆ ಅಡ್ಡಿಯಾಗಲಿಲ್ಲ. ಧೃತಿಗೆಡುವ ಬದಲು ದೇಶದ್ರೋಹಿ ಎಂಬ ಕೂಗನ್ನು ಸವಾಲಾಗಿ ಸ್ರೀಕರಿಸಿದ ಆತ ಮತ್ತೆರಡು ಸೆಂಚುರಿ ಬಾರಿಸಿದ. ಸರಣಿ ಕೊನೆಗೊಂಡಾಗ ೧೫೧.೬೩ ಸರಾಸರಿಯೊಂದಿಗೆ ೪೫೪ ರನ್ ಹೊಡೆದಿದ್ದ. ನಿರೀಕ್ಷೆಯಂತೆಯೇ ಸರಣಿ ಪುರುಷೋತ್ತಮನಾದ. “ಅವತ್ತು ಉನ್ಮತ್ತ ಜನರು ‘ದೇಶದ್ರೋಹಿ..ದೇಶದ್ರೋಹಿ’ ಎಂದು ಕೂಗುತ್ತಿರುವಾಗ ಅಮ್ಮ ಅಳುತ್ತಿದ್ದಳು, ನನ್ನ ಕುಟುಂಬವೇ ದಿಗ್ಬಮೆಗೊಳಗಾಗಿತ್ತು” ಎನ್ನುತ್ತಾನೆ ಪೀಟರ್‌ಸನ್.
ಇತ್ತ ಪೀಟರ್‌ಸನ್‌ನನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು ಪ್ರ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ. “ಅಂದು ಪೀಟರ್‌ಸನ್ ಲೆಯಿಂದ ನೇರವಾಗಿ ನಮ್ಮ ಬೆರಿಯಾ ರೋವರ್‍ಸ್ ಕ್ಲಬ್‌ಗೆ ಆಗಮಿಸಿದ. ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್‌ಗೆ ಇಳಿದೆ. ನಾಲ್ಕನೇ ಕ್ರಮಾಂಕದಲ್ಲಿ ಪೀಟರ್‌ಸನ್ ಬ್ಯಾಟಿಂಗ್‌ಗೆ ಬರುವ ಮೊದಲೇ ೭೦ ರನ್ ಹೊಡೆದಿದ್ದೆ. ಆದರೆ ಆತ ನನಗಿಂತಲೂ ಮೊದಲು ಶತಕ ಪೂರೈಸಿದ. ನಿಜಕ್ಕೂ ”Unbelievable” ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎರ್ರೋಲ್ ಮಾರಿಸ್ ನೆನಪಿಸಿಕೊಳ್ಳುತ್ತಾರೆ.
ಇದೇನೆ ಇರಲಿ. ಮುಂದಿನದ್ದು ಮೊನ್ನೆತಾನೇ ಮುಕ್ತಾಯಗೊಂಡ ಪ್ರತಿಷ್ಠಿತ ಆಷಸ್ ಸರಣಿ. ಇಂಗ್ಲೆಂಡ್‌ನ ಆಯ್ಕೆದಾರರಿಗೆ ಬೇರೆ ದಾರಿಯೇ ಇರಲಿಲ್ಲ. ಕೂದಲಿಗೆ ವಿಚಿತ್ರವಾಗಿ ಬಣ್ಣಹಾಕಿಸಿಕೊಳ್ಳುವ ೨೫ ವರ್ಷದ ಕೆವಿನ್ ಪೀಟರ್‌ಸನ್‌ನನ್ನು ಆಯ್ಕೆ ಮಾಡಲೇಬೇಕಾ ಗಿತ್ತು. ಸಹಜವಾಗಿಯೇ ಗ್ರಹಾಂ ಥೋರ್ಪ್ ಬದಲು ಪೀಟರ್‌ಸನ್ ಆಯ್ಕೆಯಾದ. ಟೆಸ್ಟ್‌ಗೂ ಮೊದಲು ನ್ಯಾಟ್‌ವೆಸ್ಟ್ ಏಕದಿನ ಸರಣಿ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲು. ಎರಡನೇ ಪಂದ್ಯಕ್ಕೂ ಅದೇ ಗತಿ ಎದುರಾಗಿತ್ತು. ಆದರೆ ೬೫ ಬಾಲುಗಳಲ್ಲಿ ೮ ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳೊಂದಿಗೆ ೯೧ ರನ್ ಬಾರಿಸಿದ ಪೀಟರ್‌ಸನ್ ವಿಶ್ರಚಾಂಪಿಯನ್ನರ ವಿರುದ್ಧ ಇಂಗ್ಲೆಂಡ್‌ಗೆ ೩ ವಿಕೆಟ್ ಜಯ ತಂದುಕೊಟ್ಟ. ಹೀಗೆ ಪ್ರತಿ ಪಂದ್ಯಗಳಲ್ಲೂ ಸ್ಕೋರ್ ಮಾಡುತ್ತಿದ್ದ ಆತ, ಸರಣಿ ಮುಗಿದಾಗ ೧೬೨.೨೫ ಸರಾಸರಿಯನ್ನು ದಾಖಲಿಸಿದ್ದ.
ನಂತರ ಟೆಸ್ಟ್ ಸರಣಿ. ಟೆಸ್ಟ್‌ನಲ್ಲೂ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋಲು. ಎರಡನೇ ಪಂದ್ಯದಲ್ಲಿ ಪೀಟರ್‌ಸನ್, ಫ್ಲಿಂಟಾಫ್ ಜತೆಯಾಟ. ಇಂಗ್ಲೆಂಡ್‌ಗೆ ರೋಚಕ ಗೆಲುವು. ಮೂರನೆಯ ಪಂದ್ಯ ದಲ್ಲಿ ಕಡೆಯ ನಾಲ್ಕು ಓವರ್‌ಗಳಲ್ಲಿ ಕೊನೆಯ ವಿಕೆಟ್ ತೆಗೆಯಲಾರದೆ ಡ್ರಾಗೆ ತೃಪ್ತಿ. ನಾಲ್ಕನೇ ಪಂದ್ಯದಲ್ಲಿ ಫ್ಲಿಂಟಾಫ್ ಅಬ್ಬರ. ಇಂಗ್ಲೆಂಡ್‌ಗೆ ಗೆಲುವು. ಹೀಗೆ ಇಂಗ್ಲೆಂಡ್ ೨-೧ ಮುನ್ನಡೆ ಸಾಧಿಸಿತು. ಆದರೆ ಕೊನೆಯ ಪಂದ್ಯವನ್ನು ಗೆದ್ದು, ಸರಣಿಯನ್ನು ಸಮಮಾಡಿಕೊಂಡು ಆಷಸ್ ಕಪ್ಪನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಎಲ್ಲ ಅವಕಾಶವೂ ಆಸ್ಟ್ರೇಲಿಯಾಕ್ಕಿತ್ತು. ಹಾಗಾಗಿ ಎಲ್ಲರ ಕಣ್ಣೂ ಕೊನೆಯ ಪಂದ್ಯದ ಮೇಲಿತ್ತು. ಮಳೆ ಕಣ್ಣಾಮುಚ್ಚಾಲೆ ಆಡತೊಡಗಿತು. ಆದರೂ ಪಟ ಪಟನೆ ಉದುರುತ್ತಿದ್ದ ವಿಕೆಟ್‌ಗಳು ಪಂದ್ಯಕ್ಕೆ ಜೀವ ತಂದುಕೊಟ್ಟಿದ್ದವು. ಅದರಲ್ಲೂ ಎರಡನೇ ಇನಿಂಗ್ಸ್‌ನಲ್ಲಿ ಮೆಗ್ರಾತ್-ಶೇನ್‌ವಾರ್ನ್ ದಾಳಿಗೆ ತತ್ತರಿಸಿ ೧೨೫ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ಸೋತು ಆಷಸ್ ಕಪ್ಪನ್ನು ಕಳೆದುಕೊಳ್ಳುವ ಅಪಾಯದಲ್ಲಿತ್ತು. ಆಗ ಮೈದಾನಕ್ಕಿಳಿದವನೇ ಕೆವಿನ್ ಪೀಟರ್‌ಸನ್. ಅದೆಂಥ ಕ್ರೂರ ಸನ್ನಿವೇಶವೆಂದರೆ ಒಂದು ವೇಳೆ ರನ್ ಹೊಡೆದು ಪಂದ್ಯವನ್ನು ಉಳಿಸಿದರೆ ಹೀರೊ, ವಿಕೆಟ್ ಕಳೆದುಕೊಂಡರೆ ಖಳನಾಯಕನಾಗ ಬೇಕಾಗಿತ್ತು. ಮೆಗ್ರಾತ್ ಎಸೆದ ಮೊದಲ ಬಾಲು ಕೂದಲೆಳೆಯಂತರದಲ್ಲಿ ಗ್ಲೋವ್ಸ್‌ನಿಂದ ಹೊರನಡೆದು ಪೀಟರ್‌ಸನ್‌ನ ಭುಜಕ್ಕೆ ತಾಕಿ ಕೀಪರ್ ಗಿಲ್‌ಕ್ರಿಸ್ಟ್ ಕೈಸೇರಿತು. ಒಂದು ವೇಳೆ ಗ್ಲೋವ್ಸ್‌ಗೆ ತಗುಲಿದ್ದರೆ…? ಮೆಗ್ರಾತ್‌ಗೆ ಹ್ಯಾಟ್ರಿಕ್, ಇಂಗ್ಲೆಂಡ್‌ಗೆ ಸೋಲು, ಆಷಸ್ ಆಸ್ಟ್ರೇಲಿಯಾ ಪಾಲು! ಅಷ್ಟೇಕೆ, ಶೇನ್‌ವಾರ್ನ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ನೀಡಿದ ಕ್ಯಾಚನ್ನು ಗಿಲ್‌ಕ್ರಿಸ್ಟ್ ಹಿಡಿದಿದ್ದರೆ ಅಥವಾ ಕೀಪರ್ ಗ್ಲೋವ್ಸ್‌ಗೆ ತಾಕಿ ಸಿಡಿದ ಚೆಂಡನ್ನು ಹೇಡನ್ ಹಿಡಿದಿದ್ದರೆ ಪೀಟರ್ ಸನ್ ಮತ್ತೂ ಸೊನ್ನೆಗೆ ಔಟಾಗುತ್ತಿದ್ದ. ಆದರೆ ಅದೃಷ್ಟ ಖುಲಾಯಿಸಿತ್ತು. ಸಂಜೆ ನಾಲ್ಕರ ವೇಳೆಗೆ ಔಟಾಗುವ ಮೊದಲು ೧೫ ಬೌಂಡರಿ ಹಾಗೂ ೭ ಸಿಕ್ಸರ್‌ಗಳೊಂದಿಗೆ ೧೫೮ ರನ್ ಹೊಡೆದಿದ್ದ ಪೀಟರ್‌ಸನ್.
ಇಂಗ್ಲೆಂಡ್ ೩೦೦ರ ಗಡಿ ದಾಟಿತ್ತು. ೧೯೮೬ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ಆಷಸ್ ಸರಣಿಯನ್ನು ಜಯಿಸಿದೆ. ಅದರೊಂದಿಗೆ ಕೆವಿನ್ ಪೀಟರ್‌ಸನ್ ಎಂಬ ಹೊಸ ತಾರೆಯೂ ಹೊರಹೊಮ್ಮಿದ್ದಾನೆ. ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ನೆರೆದಿದ್ದ ೨೩ ಸಾವಿರ ಜನರು ಪೀಟರ್‌ಸನ್ ಜಪ ಮಾಡಿದ್ದಾರೆ. ‘We only wish you were English” ಎಂದು ಅಕ್ಕರೆಯಿಂದ ಹೇಳುತ್ತಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುತ್ತಿದೆ.
ಖಂಡಿತಾ ೪೦೨ ರನ್ ಹಾಗೂ ೨೪ ವಿಕೆಟ್ ಗಳಿಸಿರುವ ಆಂಡ್ರ್ಯೂ ಫ್ಲಿಂಟಾಫ್ ಸಾಧನೆ ಪೀಟರ್‌ಸನ್‌ಗಿಂತಲೂ ಹಿರಿದು. ಆದರೆ ಖುಷಿ ಕೊಡುವುದು ಪೀಟರ್‌ಸನ್‌ನ ಹುಂಬು, ಹುಚ್ಚು ಬ್ಯಾಟಿಂಗ್. ಜತೆಗೆ ಆಸ್ಟ್ರೇಲಿಯಾವೆಂಬ ತಂಡ, ಟೈಗರ್‌ವುಡ್ಸ್ ಎಂಬ ಗಾಲ್ಫ್ ಆಟಗಾರ, ಮೈಕೆಲ್ ಶೂಮಾಕರ್ ಎಂಬ ಫಾರ್ಮುಲಾ-೧ ಡ್ರೈವರ್‌ಗಳು ‘ಅದಮ್ಯ’ (Invincible) ಎಂಬ ವಿಧಿತ ಸಂಗತಿಗಳು ಸುಳ್ಳಾಗಿ ಹೊಸ ಪ್ರತಿಭೆಗಳು ಹೊರಬರುತ್ತಿರುವುದು.
ಇದು ಚಾಲ್ತಿಯಲ್ಲಿರಲಿ.
ಪ್ರತಾಪ್ ಸ್ಹಿಮ

ಕಾಮೆಂಟ್‌ಗಳಿಲ್ಲ: