ಪುಟಗಳು

ಮಂಗಳವಾರ, ನವೆಂಬರ್ 30, 2010

ಬಾಲ ಕಾರ್ಮಿಕನ ಸ್ವಗತ---ವಾಣಿ ಶೆಟ್ಟಿ




ಬಾಲ ಕಾರ್ಮಿಕನ ಸ್ವಗತ!

ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ

ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ

ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ?

ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ!



ಎಲ್ಲೆಯಿಲ್ಲದ ಬಾನ ಕಾಮನಬಿಲ್ಲೇ,ಕೆಳಗಿಳಿಯಬೇಡ ಅಲ್ಲೇ ಇರು

ಬಂದರೆ ನನ್ನಪ್ಪನಂತೆ ನಿನ್ನನ್ನೂ ಜನ ಕತ್ತರಿಸಿ ಮಾರಿಬಿಟ್ಟಾರು

ಇಡೀ ಸ್ಥಬ್ಧ ಜಗದಲ್ಲಿ ಅಮ್ಮ , ನೀ ನೆನಪಾಗಿಯೇ ಇದ್ದುಬಿಡು

ಹೃದಯ ಪುಷ್ಪವಾಗಿಸಿ,ನದಿ ತೀರದಲ್ಲಿ ನಿನ್ಯಾರೂ ಇಲ್ಲಿ ಪೂಜಿಸರು .



ಕೊಟ್ಟ ಹಿಂಸೆಗಳು ಗೋಡೆಯಾಚೆ ಹೋಗಿ ಸುದ್ದಿಯಾಗಬಹುದು

ಅದಕ್ಕೆ ಕಣ್ರೆಪ್ಪೆಯ ಕಾವಲಿರಿಸಿ ಒಳಗೆ ಜೋಪಾನವಾಗಿರಿಸಿದ್ದು

ಮೈಯ ಮೇಲಿನ ಬಾಸುಂಡೆಗಳು ಚಿತ್ತಾರದಂತಿರಲಿಲ್ಲವೇನೋ

ಅದಕ್ಕೆ ನೆತ್ತರ ಬರಿಸಿ ರಂಗನ್ನಿಟ್ಟು ಮತ್ತಷ್ಟು ಮೆರುಗುಗೊಳಿಸಿದ್ದು !



ಅತ್ತೂ ಅತ್ತೂ ಏನೋ ಹೊಳೆದಂತಾಗಿ ಮೆಲ್ಲನೆ ಹೊರಜಗತ್ತಿಗೆ ಅಡಿಯಿಟ್ಟೆ

ಓಹ್ ,ಮೂರಂತಸ್ತಿನ ಮನೆಗಳಿರುವ ಬೀದಿಯಲ್ಲಿ ಅಲ್ಲಿನ ಜನರೇ ಇಲ್ಲೆಲ್ಲಾ

ಹಣೆಬರಹ ಬದಲಾಗಬಹುದು,ಹಾಗಂದುಕೊಂಡೆ ಹೆಜ್ಜೆ ಮುಂದಿಟ್ಟೆ

ಮತ್ತೆ ಮುಂದೆ ಹೋಗಲು ದಾರಿ ತಿಳಿಯಲಿಲ್ಲ ..



ರಾತ್ರಿಯ ನಿಶ್ಯಬ್ಧದಲ್ಲಿ ಬಿಕ್ಕಳಿಕೆಯೂ ಲಯವಾಗುತ್ತದೆ

ಭಾವನೆಗಳು ಕರಗಿ ಹೊಟ್ಟೆ ಮತ್ತೆ ಚುರುಗುಡುತ್ತದೆ

ಅಕ್ಕರೆ,ಪ್ರೀತಿ,ಓದು ಬರಹ ಎಲ್ಲವೂ ಕನಸಾದಂತೆ...

ಪುನಃ ಒದ್ದೆ ತಲೆದಿಂಬಿನ ಮೇಲೆ ನಾಳೆಯ ಹಸಿವಿನದೇ ಚಿಂತೆ….

ವಾಣಿ ಶೆಟ್ಟಿ

ಕಾಮೆಂಟ್‌ಗಳಿಲ್ಲ: